ತಾಲಿಬಾನ್ ಬೆಂಬಲಿತ ಮೌಲ್ವಿ ಮೌಲಾನಾ ಫಜುಲ್ಲಾ ವಿರುದ್ದ ಪಾಕಿಸ್ತಾನದ ಸೇನೆ ಭಾರಿ ಶಸ್ತ್ರಾಸ್ತ್ರಗಳೊಂದಿಗೆ ಸ್ವಾತ್ ಕಣಿವೆಯಲ್ಲಿ ಕಾರ್ಯಾಚರಣೆ ಆರಂಭಿಸಿದೆ.
ಸ್ವಾತ್ ಕಣಿವೆಯಲ್ಲಿ ಕಳೆದ ಮೂರು ವಾರಗಳಿಂದ ನಿರಂತರವಾಗಿ ನಡೆಯುತ್ತಿರುವ ಸೇನಾಕಾರ್ಯಾಚರಣೆಯಲ್ಲಿ 230 ಉಗ್ರರು ಬಲಿಯಾಗಿದ್ದು,ಹಲವಾರು ಉಗ್ರರು ಗಾಯಗೊಂಡಿದ್ದಾರೆ.
ಉಗ್ರರ ಪ್ರಮುಖ ತಾಣವಾದ ಇಮಾಮ್‌ಧರಿ ಎನ್ನುವಲ್ಲಿ ಉಗ್ರರ ಚಟುವಟಿಕೆಗಳ ನಿಯಂತ್ರಣಕ್ಕಾಗಿ ಅನೇಕ ಚೆಕ್ ಪೋಸ್ಟ್‌ಗಳನ್ನು ಸೇನೆ ಸ್ಥಾಪಿಸಿದ್ದು, ಅತ್ಯಾಧುನಿಕ ಶಸ್ತ್ರಾಸ್ತ್ರಗಳೊಂದಿಗೆ ಸಜ್ಜಾಗಿದೆ.
ಇಂದು ಬೆಳಿಗ್ಗೆ ಸ್ವಾತ್ ಕಣಿವೆಯಾದ್ಯಂತ ಉಗ್ರರ ಚಟುವಟಿಕೆ ಹಾಗೂ ನಾಗರಿಕರ ರಕ್ಷಣೆಗಾಗಿ ಕರ್ಫ್ಯೂ ಘೋಷಿಸಲಾಗಿದ್ದು,ಇಮಾಮ್‌ಧರಿಯಲ್ಲಿ ರಸ್ತೆಗಳನ್ನು ಸೇನಾವಾಹನಗಳು ಆಕ್ರಮಿಸಿಕೊಂಡಿವೆ.
ಕೆಲ ದಿನಗಳಲ್ಲಿ 90 ಉಗ್ರಗಾಮಿಗಳನ್ನು ಬಂಧಿಸಿ ಚಾರ್‌ಬಾಗ್, ಖಾವಲಕೇಲಾ, ಮಟ್ಟಾ ಪ್ರದೇಶಗಳನ್ನು ಸೇನೆಯು ನಿಯಂತ್ರಣಕ್ಕೆ ತೆಗೆದುಕೊಂಡಿದೆ ಎಂದು ಸೇನಾ ಮೂಲಗಳು ತಿಳಿಸಿವೆ.
ಮೌಲ್ವಿ ಮೌಲನಾ ಫಜುಲ್ಲಾ ರೇಡಿಯೋ ಮೂಲಕ ಜಿಹಾದ್ ಬಿತ್ತರಿಸುತ್ತಿರುವುದರಿಂದ ಮೌಲಾನಾ ರೇಡಿಯೋ ಎಂದು ಖ್ಯಾತನಾಗಿದ್ದಾನೆ. ಪಾಕಿಸ್ತಾನಿಯರಿಗೆ ಹಾಗೂ ವಿದೇಶಿಯರಿಗೆ ಪ್ರವಾಸಿ ಸ್ಥಳವಾದ ಸ್ವಾತ್ ಕಣಿವೆಯ ಸುಮಾರು 60 ಹಳ್ಳಿಗಳಲ್ಲಿ ಸರಕಾರಕ್ಕೆ ಸಮನಾಗಿ ಅಡಳಿತವನ್ನು ನಡೆಸುತ್ತಿದ್ದಾನೆ ಎಂದು ಸರಕಾರ ಆರೋಪಿಸಿದೆ.
|