ಪಾಕಿಸ್ತಾನದ ಮಾಜಿ ಪ್ರಧಾನಿ ಬೆನಜೀರ್ ಭುಟ್ಟೊ ಅವರು ಗುರುವಾರ ತಡರಾತ್ರಿ ದುಬೈಗೆ ಹೊರಟಿದ್ದ ಸಂದರ್ಭದಲ್ಲಿ, ಅವರ ಪಾಸ್ಪೋರ್ಟ್ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡ ಹಿನ್ನೆಲೆಯಲ್ಲಿ, ವಿಮಾನ ನಿಲ್ದಾಣ ಪ್ರಾಧಿಕಾರದ ಅಧಿಕಾರಿಗಳು ಅವರ ಪ್ರಯಾಣಕ್ಕೆ ತಡೆಒಡ್ಡಿದರು.
ದುಬೈನಲ್ಲಿ ನೆಲೆಸಿರುವ ತಮ್ಮ ಪತಿ ಆಸಿಫ್ ಅಲಿ ಜರ್ದಾರಿ, ಮಗಳು ಮತ್ತು ತಾಯಿಯನ್ನು ಕಾಣಲು ಭುಟ್ಟೊ ಅವರು ನಾಲ್ಕು ದಿನಗಳ ಕಾಲ ಗಲ್ಫ್ ರಾಷ್ಟ್ರಕ್ಕೆ ಹೊರಟಿದ್ದರು. ಆದರೆ, ಇಸ್ಲಾಮಾಬಾದಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಾಧಿಕಾರದ ಅಧಿಕಾರಿಗಳು ಅವರಿಗೆ ತಡೆಯೊಡ್ಡಿದ್ದರಿಂದ ಭುಟ್ಟೊಗೆ ಪ್ರಯಾಣಯೋಗ ದೊರೆಯಲಿಲ್ಲ.
ಪಾಸ್ಪೋರ್ಟ್ನಲ್ಲಿ ಕಾಣಿಸಿಕೊಂಡ ತಾಂತ್ರಿಕದೋಷದಿಂದಾಗಿ ಅವರು ಗುರುವಾರ ಪ್ರಯಾಣ ಮೊಟಕುಗೊಳಿಸಿದ್ದು, ಶುಕ್ರವಾರ ಬೆಳಿಗ್ಗೆ ದುಬೈಗೆ ಪ್ರಯಾಣಿಸಲಿದ್ದಾರೆಂದು ಪಾಕಿಸ್ತಾನ ಪೀಪಲ್ಸ್ ಪಾರ್ಟಿ ವಕ್ತಾರರು ತಿಳಿಸಿದ್ದಾರೆ.
ಪಾಕಿಸ್ತಾನದಲ್ಲಿ ಜನವರಿ 8ರಂದು ಸಾರ್ವತ್ರಿಕ ಚುನಾವಣೆಗಳು ನಿಗದಿಯಾಗಿದ್ದರಿಂದ, ಎಲ್ಲಾ ಪಕ್ಷಗಳ ರಾಜಕೀಯ ಚಟುವಟಿಕೆಗಳು ತೀವ್ರಗೊಂಡ ಸಮಯದಲ್ಲಿಯೇ ಭುಟ್ಟೊ ಅವರ ಹೊರದೇಶದ ಪ್ರಯಾಣ ಹಲವು ಸಂಶಯಗಳಿಗೆ ಎಡೆ ಮಾಡಿಕೊಟ್ಟಿದೆ.
|