ಆಕ್ಸ್‌ಫರ್ಡ್‌ನಲ್ಲಿ ಶಿಕ್ಷಣ ಪಡೆದ ಪಾಕಿಸ್ತಾನದ ಮಾಜಿ ಪ್ರಧಾನಮಂತ್ರಿ ಬೇನಜೀರ್ ಭುಟ್ಟೊ ಅವರು ಇಂಗ್ಲಿಷ್ ಪದಗಳನ್ನು ತುರುಕುವ ನಯನಾಜೂಕಿಲ್ಲದ ಉರ್ದುಭಾಷಣದ ಬಗ್ಗೆ ಈಗ ಜೋಕ್‌ಗಳು ಹುಟ್ಟಿಕೊಂಡಿವೆ. ಇಂಟರ್‌ನೆಟ್ ಮೂಲಕ ಈ ಬಗ್ಗೆ ವಿಡಿಯೊಗಳನ್ನು ಕೂಡ ಪ್ರಸಾರ ಮಾಡಲಾಗುತ್ತಿದ್ದು, ಮಾಜಿ ಪ್ರಧಾನಿಯ ವ್ಯಾಕರಣದೋಷವಿರುವ ಉರ್ದು ಬಗ್ಗೆ ಹಾಸ್ಯ ಮಾಡಲಾಗುತ್ತಿದೆ.
ಉರ್ದುವಿನಲ್ಲಿ ಸರಿಯಾಗಿ ಮಾತನಾಡಲು ಬರದ ಬೇನಜೀರ್ ಅವರಂತ ನಾಯಕಿಯರಿಂದ ನಮ್ಮ ರಾಷ್ಟ್ರೀಯ ಭಾಷೆ ಕ್ರಮೇಣ ನಶಿಸಿಹೋಗುತ್ತಿದೆಯೆಂದು ಬೇನಜೀರ್ ಮೇಲೆ ಗೂಬೆ ಕೂರಿಸಿದ್ದಾರೆ."ಬ್ರಿಟಿಷ್ ರಾಜ್ ಅಂತ್ಯಗೊಂಡು 60 ವರ್ಷಗಳು ಕಳೆದವು. ಆದರೆ ಇಂಗ್ಲೀಷ್ ಭಾಷೆಯನ್ನು ಶಾಪ ಮತ್ತು ವರ ಎರಡನ್ನೂ ಆಗಿಸಿ ಬಿಟ್ಟು ಹೋಗಿದ್ದಾರೆ.
ಇಂಗ್ಲೀಷ್ ನಮ್ಮ ವ್ಯವಹಾರದ ಭಾಷೆಯಾಗಿರಬಹುದು ಆದರೆ ಉರ್ದು ನಮ್ಮ ಇತಿಹಾಸವನ್ನು ಹಿಡಿದಿಡುವ ಮತ್ತು ಗುರುತನ್ನು ಸಾರುವ ಭಾಷೆ" ಎಂದು ವಾಷಿಂಗ್ಟನ್ ಮೂಲದ ಯಾವರ್ ಹೆರೆಕಾರ್ ಸ್ಥಳೀಯ ಸುದ್ದಿಪತ್ರಿಕೆಗೆ ಬರೆದಿದ್ದಾರೆ.
"ಪಾಕಿಸ್ತಾನಿಯರಾಗಿ ನಾವು ನಮ್ಮ ಮಾತೃಭಾಷೆ ಬಗ್ಗೆ ಹೆಮ್ಮೆ ತಾಳಬೇಕು ಮತ್ತು ನಮ್ಮ ಸಂಸ್ಕೃತಿಯನ್ನು ಒಳಗಿನಿಂದಲೇ ನಾಶ ಮಾಡುವ ಮುಂಚೆ ವಸಾಹತುಶಾಹಿ ಮನಸ್ಥಿತಿಯಿಂದ ಹೊರಬರಬೇಕು" ಎಂದು ಅವರು ಗಂಭೀರವಾಗಿ ಬರೆದಿದ್ದಾರೆ.
ಮಾಜಿ ಪ್ರಧಾನಿ ನವಾಜ್ ಷರೀಫ್ ಜತೆ ಶುಕ್ರವಾರ ರಾತ್ರಿ ನಡೆದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಭುಟ್ಟೊ ಉರ್ದುವಿನಲ್ಲಿ ತಮ್ಮ ನಿಲುವನ್ನು ಜನರಿಗೆ ವಿವರಿಸಲು ತಿಣುಕಾಟ ನಡೆಸಿದ್ದು ಕಂಡುಬಂತು. "ಕಯೀ ಡಿಮ್ಯಾಂಡ್ಸ್ ಕುಬೂಲ್ ಗಯೇ ಹೈನ್, ಡೇಟ್ ಆಫ್ ಎಲೆಕ್ಸನ್ಸ್ ದಿಯಾ ಗಯಾ ಹೈ, ಎಮರ್ಜೆನ್ಸಿ ಕತಮ್ ಕೀ ಗಯೀ ಹೈ... ಎಮರ್ಜೆನ್ಸಿ ಕತಮ್ ಕರ್ನೆ ಕಾ ಡೇಟ್ ದಿಯಾ ಗಯಾ ಹೈ.... ಯಹೆ ಬಹುತ್ ಸಿಗ್ನಿಫಿಕೆಂಟ್ ಅಸೆಪ್ಟೆನ್ಸ್ ಹೈ" ಎಂದು ಬೇನಜೀರ್ ಇಂಗ್ಲೀಷ್ ಮಿಶ್ರಿತ ಉರ್ದುವಿನಲ್ಲಿ ಭಾಷಣ ಮಾಡಿದಾಗ ಜನರಿಗೆ ಅರ್ಥವಾಗದೇ ಮಿಕಿ ಮಿಕಿ ಕಣ್ಣು ಬಿಟ್ಟರೆಂದು ಹೇಳಲಾಗಿದೆ.
|