ಪಾಕಿಸ್ತಾನ ಸೇನೆಯ ವಿರುದ್ಧ ಹೋರಾಡುತ್ತಿರುವ ತಾಲಿಬಾನ್ ಧರ್ಮಗುರು ಮೌಲಾನಾ ಫಜಲುಲ್ಲಾ ಎಫ್‌ಎಂ ರೇಡಿಯೊನಲ್ಲಿ ಮಾತನಾಡಿ ಭದ್ರತಾ ಪಡೆಗಳ ಜತೆ ಕದನದಲ್ಲಿ ತಾನು ಗಾಯಗೊಂಡಿರುವುದಾಗಿ ಹೇಳಿದ್ದಾನೆ. 32 ವರ್ಷ ಪ್ರಾಯದ ಫಜಲುಲ್ಲಾ ಅವರು ಭದ್ರತಾ ಪಡೆಗಳ ಬಲಪ್ರಯೋಗದಿಂದ ಸ್ವಗ್ರಾಮವನ್ನು ತ್ಯಜಿಸಿದ್ದು ಪಲಾಯನ ಸೂತ್ರ ಮಾಡಿದ್ದಾನೆ.
ಆದರೆ ತಮ್ಮ ಗಾಯದ ಪ್ರಮಾಣದ ಬಗ್ಗೆ ಹೆಚ್ಚಿಗೆ ಏನನ್ನೂ ಅವನು ಬಹಿರಂಗಪಡಿಸಲಿಲ್ಲ. ತಮ್ಮ ಡೆಪ್ಯೂಟಿ ಮೌಲಾನಾ ಶಾ ಡಾವ್ರಾನ್ ನಾಲ್ಕು ಮಂದಿಯ ಜತೆ ಸತ್ತಿದ್ದಾರೆಂಬ ಸರ್ಕಾರದ ಹೇಳಿಕೆಯನ್ನು ಕೂಡ ಫಜಲುಲ್ಲಾ ನಿರಾಕರಿಸಿದ್ದಾನೆ. ವರದಿಗಳ ಪ್ರಕಾರ ಫಜಲುಲ್ಲಾ ತನ್ನ ಬೆಂಬಲಿಗರೊಂದಿಗೆ ಪಿಯೋಚಾರ್ ಪರ್ವತದ ಹೊರಪ್ರದೇಶಕ್ಕೆ ಪಲಾಯನ ಮಾಡಿದ್ದಾನೆಂದು ಹೇಳಲಾಗಿದೆ.
ಯಾವುದೇ ವಿದೇಶಿ ಉಗ್ರಗಾಮಿ ಸ್ವಾಟ್‌ನಲ್ಲಿ ಬಂಧಿತನಾದರೆ ತಾನು ಹೊಣೆಯಾಗುವುದಾಗಿ ಫಜಲುಲ್ಲಾ ರೇಡಿಯೊಗೆ ನೀಡಿದ ಹೇಳಿಕೆಯಲ್ಲಿ ತಿಳಿಸಿದ್ದಾನೆ. ಸ್ವಾಟ್‌ನಲ್ಲಿ ವಿದೇಶಿ ಉಗ್ರಗಾಮಿಗಳು ಯಾರೂ ಇಲ್ಲವೆಂದು ಹೇಳಿದ ಅವನು ಮುಷರ್ರಫ್ ಆಡಳಿತ ತನಗೆ ಕಳಂಕ ತರಲು ಯತ್ನಿಸುತ್ತಿದೆಯೆಂದು ಆಪಾದಿಸಿದ್ದಾನೆ.
ಸ್ವಾಟ್, ಶಾಂಗ್ಲಾ ಮತ್ತು ಮಲಕಾಂಡ್ ಉಳಿದ ಭಾಗಗಳಲ್ಲಿ ಶರಿಯಾ ಕಾನೂನನ್ನು ಜಾರಿಗೆ ತರಲು ತಮ್ಮ ಹೋರಾಟ ಮುಂದುವಿರಿಸುವುದಾಗಿ ಹೇಳಿದ ಅವನು ಶರಿಯಾ ಕಾನೂನಿಗೆ ತಮ್ಮ ರಕ್ತವನ್ನು ಅರ್ಪಿಸಲು ಸಿದ್ಧವಾಗಿರುವುದಾಗಿ ಹೇಳಿದ್ದಾನೆ.
|