ಶ್ರೀಲಂಕಾದಲ್ಲಿ ತಮಿಳು ಉಗ್ರಗಾಮಿ ಪಡೆ ಎಲ್‌ಟಿಟಿಇ ಮತ್ತು ಲಂಕನ್ ಸೇನೆ ಮಧ್ಯೆ ನಡೆಯುತ್ತಿರುವ ಕಾಳಗ ತಾರಕಕ್ಕೇರಿದ್ದು, ಮಂಗಳವಾರ ಮಧ್ಯಾಹ್ನದ ನಂತರ ನಡೆದ ಕಾಳಗದಲ್ಲಿ ಒಟ್ಟು 40 ತಮಿಳು ಉಗ್ರರು ಮತ್ತು 4 ಸೈನಿಕರು ಮೃತಪಟ್ಟಿದ್ದಾರೆಂದು ಲಂಕನ್ ಸೇನಾಧಿಕಾರಿಗಳು ತಿಳಿಸಿದ್ದಾರೆ.
ಲಂಕಾದ ವಾಯುವ್ಯ ಮನ್ನಾರ್ ಪ್ರಾಂತ್ಯದಲ್ಲಿ ಮಂಗಳವಾರ ಮಧ್ಯಾಹ್ನ ಸೇನೆ ಮತ್ತು ಉಗ್ರರ ನಡುವೆ ನಡೆದ ಭೀಕರ ಗುಂಡಿನ ಕಾಳಗದಲ್ಲಿ ಕನಿಷ್ಠ ಪಕ್ಷ 20 ಉಗ್ರರು ಹತರಾಗಿದ್ದು, 30ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.
ಈ ಕಾಳಗದಲ್ಲಿಯೇ ಕನಿಷ್ಠ ಪಕ್ಷ 3 ಸೈನಿಕರು ವೀರ ಮರಣವನ್ನಪ್ಪಿದ್ದು ಇನ್ನಿತರ ಏಳು ಸೈನಿಕರು ತೀವ್ರವಾಗಿ ಗಾಯಗೊಂಡಿದ್ದಾರೆಂದು ಸೇನಾ ವಕ್ತಾರರು ಹೇಳಿದ್ದಾರೆ.
ಇದೇ ವೇಳೆ, ಮಂಗಳವಾರ ಸಂಜೆ ಉತ್ತರ ಜಾಫ್ನಾದಲ್ಲಿ ಸೇನೆ ಮತ್ತು ಉಗ್ರರ ನಡುವೆ ನಡೆದ ಪರಸ್ಪರ ಗುಂಡಿನ ದಾಳಿಯಲ್ಲಿ, ಸೇನಾ ಪಡೆ ಉಗ್ರರ ಬಂಕರ್‌ವೊಂದನ್ನು ನಾಶಪಡಿಸಿ, ನಾಲ್ಕು ಉಗ್ರಗಾಮಿಗಳನ್ನು ಹತ್ಯೆಗೈದಿದೆ ಎಂದು ಲಂಕಾ ರಕ್ಷಣಾ ಸಚಿವಾಲಯದ ಮೂಲಗಳು ವರದಿ ಮಾಡಿವೆ.
|