ಕೆರೆಬಿಯನ್ ದ್ವೀಪದಲ್ಲಿ ಬೀಸಿದ ಚಂಡುಮಾರುತಕ್ಕೆ 10 ಮಂದಿ ಬಲಿಯಾಗಿದ್ದು, ಪ್ರವಾಹ, ಭೂಕುಸಿತದ ಘಟನೆಗಳು ವರದಿಯಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಡೊಮಿನಿಕನ್ ಗಣರಾಜ್ಯವಾದ ಕೆರೆಬಿಯನ್ ದ್ವೀಪದಲ್ಲಿ ಪ್ರವಾಹ ಉಕ್ಕೇರುತ್ತಿದ್ದಂತೆ ಜನರು ಗಿಡಗಳನ್ನು ಏರಿ ಅಥವಾ ಮನೆಯ ಛಾವಣೆಯಲ್ಲಿ ರಕ್ಷಣೆ ಪಡೆಯುತ್ತಿದ್ದಾರೆ ಎಂದು ಸ್ಯಾಂಟಿಯಾಗೊ ಪ್ರಾಂತ್ಯದ ರಾಜ್ಯಪಾಲ ಜೋಸ್ ಇಕ್ವಿರೊಡೊ ತಿಳಿಸಿದ್ದಾರೆ.
ಸ್ಯಾಂಟಿಯಾಗೊದ ಉತ್ತರ ಭಾಗ ಭಾರಿ ಚಂಡುಮಾರುತಕ್ಕೆ ಸಿಲುಕಿ ಅಪಾರ ಹಾನಿಗೆ ಒಳಗಾಗಿದ್ದಲ್ಲದೇ ಆಣೆಕಟ್ಟು ತುಂಬಿಹೋಗಿ ನೀರು ಹೊರಬರುತ್ತಿರುವುದು ಅಪಾಯದ ಮುನ್ಸೂಚನೆಯಾಗಿದೆ ಎಂದು ಹೇಳಿದ್ದಾರೆ.
ಅಧಿಕಾರಿಗಳ ಪ್ರಕಾರ ಏಳು ಮಂದಿ ಸಾವನ್ನಪ್ಪಿದ್ದು, ನದಿಗಳ ಪ್ರವಾಹ ಉಲ್ಬಣಗೊಳ್ಳುತ್ತಿರುವುದರಿಂದ 24,500 ಮಂದಿಯನ್ನು ಸುರಕ್ಷಿತ ಸ್ಥಳಗಳಿಗೆ ಕಳುಹಿಸಲಾಗಿದೆ ಎಂದು ತುರ್ತುಸ್ಥಿತಿ ಕಾರ್ಯಾಚರಣೆ ಕೇಂದ್ರದ ಮುಖ್ಯಸ್ಥ ಜುವಾನ್ ಮ್ಯಾನುವೆಲ್ ಮೆಂಡೆಝ್ ತಿಳಿಸಿದ್ದಾರೆ.
ಕಳೆದ ರಾತ್ರಿ ಸುರಿದ ಭಾರಿ ಮಳೆಯಿಂದಾಗಿ 5 ಸಾವಿರ ಮನೆಗಳು ಜಲಾವೃತ್ತವಾಗಿದ್ದು, ಹಲವಾರು ಮನೆಗಳು ಕುಸಿತ ಕಂಡಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
|