ಮುಂಬರುವ ಮಹಾಚುನಾವಣೆಗಳಿಗೆ ತಮ್ಮ ನಾಮಪತ್ರ ತಿರಸ್ಕೃತವಾಗಿರುವುದನ್ನು ಪ್ರಶ್ನಿಸಿ ಮಾಜಿ ಪ್ರಧಾನಿ ನವಾಜ್ ಶರೀಫ್ ಮತ್ತು ಸೋದರ ಶಾಬಾಜ್ ಸಲ್ಲಿಸಿದ್ದ ಅರ್ಜಿಯನ್ನು ಪಾಕಿಸ್ತಾನ ಚುನಾವಣಾ ಆಯೋಗವು ತಳ್ಳಿ ಹಾಕಿದೆ.
ಇದರೊಂದಿಗೆ, ಚುನಾವಣಾ ಕಣಕ್ಕಿಳಿಯುವ ಅವರಿಬ್ಬರ ಪ್ರಯತ್ನಗಳ ಬಾಗಿಲು ಮುಚ್ಚಿದಂತಾಗಿದೆ. ಮುಖ್ಯ ಚುನಾವಣಾ ಆಯುಕ್ತ ಖಾಜಿ ಮಹಮದ್ ಫಾರೂಕ್ ಅವರೆದುರು ಹಾಜರಾದ ನವಾಜ್ ಸಹೋದರರ ವಕೀಲ ಅಕ್ರಮ್ ಶೇಖ್, ನಾಮಪತ್ರ ತಿರಸ್ಕರಿಸಿದ ಚುನಾವಣಾಧಿಕಾರಿಯ ತೀರ್ಮಾನ ಬದಲಿಸುವಂತೆ ಕೋರಿದರು.
ಆಯೋಗವು ನೇರವಾಗಿ ಇಂತಹ ವಿಷಯಗಳ ವಿಚಾರಣೆ ಮಾಡುವಂತಿಲ್ಲ ಎಂಬ ಆಧಾರದಲ್ಲಿ ಆಯೋಗವು ಅವರ ವಾದವನ್ನು ತಳ್ಳಿ ಹಾಕಲಾಯಿತು.
ಪಂಜಾಬಿನ ಎರಡು ಸಂಸತ್ ಕ್ಷೇತ್ರಗಳಿಗೆ ಶರೀಫ್ ಸೋದರರು ಸಲ್ಲಿಸಿದ್ದ ನಾಮಪತ್ರಗಳನ್ನು ಚುನಾವಣಾಧಿಕಾರಿಯು ಈ ಹಿಂದೆ ತಿರಸ್ಕರಿಸಿದ್ದರು. ನವಾಜ್ ಶರೀಫ್ ಅವರ ನಾಮಪತ್ರಗಳನ್ನು 2002ರಲ್ಲಿ ಭಯೋತ್ಪಾದನೆ ಮತ್ತು ಹೈಜಾಕಿಂಗ್ ಆರೋಪಗಳ ನೆಪ ನೀಡಿ ತಿರಸ್ಕರಿಸಲಾಗಿದ್ದರೆ, 1998ರಲ್ಲಿ ಲಾಹೋರಿನಲ್ಲಿ ಐವರು ಯುವಕರ ಹತ್ಯೆ ಆರೋಪದ ಹಿನ್ನೆಲೆಯಲ್ಲಿ ಶಾಬಾಜ್ ನಾಮಪತ್ರವನ್ನು ತಿರಸ್ಕರಿಸಲಾಗಿತ್ತು.
ಚುನಾವಣಾಧಿಕಾರಿಗೇ ಈ ಕುರಿತು ಮನವಿ ಸಲ್ಲಿಸುವ ಬದಲು ಶರೀಫ್ ಸಹೋದರರು ನೇರವಾಗಿ ಚುನಾವಣಾ ಆಯೋಗಕ್ಕೆ ಪತ್ರ ಬರೆದು, ನಿರ್ಧಾರ ಮರುಪರಿಶೀಲಿಸುವಂತೆ ಕೋರಿದ್ದರು.
ತಾನು ನ್ಯಾಯಾಂಗದ ಮೂಲಕ ಈ ನಿರ್ಧಾರದ ವಿರುದ್ಧ ಮೇಲ್ಮನವಿ ಸಲ್ಲಿಸಿದಲ್ಲಿ, ಇದೀಗ ಪಾಕಿಸ್ತಾನದಲ್ಲಿ ಮುಷರಫ್ ಪರವಾಗಿರುವ ನ್ಯಾಯಾಧೀಶರನ್ನು ಒಪ್ಪಿಕೊಂಡಂತಾಗುತ್ತದೆ. ಹಾಗಾಗಬಾರದೆಂಬ ಕಾರಣಕ್ಕೆ ನ್ಯಾಯಾಂಗ ಹೋರಾಟಕ್ಕೆ ಇಳಿದಿಲ್ಲ ಎಂದು ಶರೀಫ್ ತಿಳಿಸಿದ್ದರು.
|