ತಮ್ಮ ಆಳ್ವಿಕೆಯ ಮತ್ತೊಂದು ಮೈಲಿಗಲ್ಲು ದಾಟಲು ಬ್ರಿಟನ್ ರಾಣಿ ಸಿದ್ಧವಾಗಿದ್ದಾರೆ. ಶನಿವಾರ ಅವರು ಬ್ರಿಟನ್ ದೇಶವನ್ನು ಆಳಿದ ಅತ್ಯಂತ ಹಿರಿಯ ವಯಸ್ಸಿನ ರಾಣಿ ಎಂಬ ಖ್ಯಾತಿಗೆ ಪಾತ್ರರಾಗಲಿದ್ದಾರೆ.
ಎಲಿಜಬೆತ್-II ರಾಣಿಯು, ವಿಕ್ಟೋರಿಯಾ ರಾಣಿಯ ದಾಖಲೆಯನ್ನು ಮುರಿಯಲಿದ್ದಾರೆ. ಆದರೆ ಈ ಸಾಧನೆಯ ಆಚರಣೆಗಾಗಿ ಬಕಿಂಗ್‌ಹ್ಯಾಂ ಅರಮನೆಯಲ್ಲಿ ಯಾವುದೇ ವೈಭವೋಪೇತ ಕಾರ್ಯಕ್ರಮಗಳನ್ನು ನಿಗದಿಪಡಿಸಿಲ್ಲ. ರಾಣಿಯು ತಮ್ಮ ವಿಂಡ್ಸರ್ ಅರಮನೆಯಲ್ಲಿ ಪತಿ, ಡ್ಯೂಕ್ ಆಫ್ ಎಡಿನ್‌ಬರೋ ಜತೆ ಕಾಲ ಕಳೆಯಲಿದ್ದು, ಯಾವುದೇ ಬಹಿರಂಗ ಸಮಾರಂಭಗಳಿರುವುದಿಲ್ಲ.
1901ರ ಜನವರಿ 22ರಂದು ಕಾಲವಶರಾಗಿದ್ದ ವಿಕ್ಟೋರಿಯಾ ರಾಣಿಯ ಆಗಿನ ವಯಸ್ಸು 81 ವರ್ಷ, 8 ತಿಂಗಳು. ಏಪ್ರಿಲ್ 21ರಂದು 82ನೇ ವರ್ಷಕ್ಕೆ ಕಾಲಿಡುವ ರಾಣಿ ಎಲಿಜಬೆತ್ ಬ್ರಿಟನ್ ಆಳಿದ ಅತ್ಯಂತ ಹಿರಿಯ ರಾಣಿ ಎಂಬ ದಾಖಲೆಗೆ ಪಾತ್ರರಾಗಲಿದ್ದಾರೆ.
ಬ್ರಿಟನ್ ದೇಶವನ್ನು ಅತ್ಯಂತ ದೀರ್ಘಾವಧಿ ಆಳಿದವರಲ್ಲಿ ಜಾರ್ಜ್- III ಹೆಸರು ಅಗ್ರಗಣ್ಯ. ಅವರು 1820ರಲ್ಲಿ ನಿಧನರಾದಾಗ ಅವರ ವಯಸ್ಸು 81 ವರ್ಷ, 239 ದಿನಗಳು.
ಬ್ರಿಟಿಷ್ ಇತಿಹಾಸದ 1000 ವರ್ಷಗಳಲ್ಲೇ ಅತ್ಯಂತ ದೀರ್ಘಾವಧಿ ಆಳ್ವಿಕೆ ನಡೆಸಿರುವ ಹಾಲಿ ರಾಣಿಯು, ಮುಂದಿನ ವರ್ಷದ ಮಾರ್ಚ್ 5ರಂದು ಮತ್ತೊಂದು ಮೈಲಿಗಲ್ಲು ದಾಟಲಿದ್ದಾರೆ. 1216ರಿಂದ 1272ರವರೆಗೆ 56 ವರ್ಷಗಳ ಕಾಲ ರಾಜ್ಯಭಾರ ಮಾಡಿದ್ದ ಹೆನ್ರಿ-III ದೊರೆಯ ದಾಖಲೆಯನ್ನು ಅವರು ಮುರಿಯಲಿದ್ದಾರೆ. ಎಲಿಜಬೆತ್ ರಾಣಿಯು 2012ರವರೆಗೆ ಆಳಿದಲ್ಲಿ, 1760ರಿಂದ 59 ವರ್ಷ ಆಳ್ವಿಕೆ ನಡೆಸಿದ್ದ ಜಾರ್ಜ್-III ದಾಖಲೆಯನ್ನೂ ಅವರು ಮುರಿಯುವರು.
ಆದರೆ, ಅತ್ಯಂತ ದೀರ್ಘಾವಧಿಯ ಆಳ್ವಿಕೆಯ ದಾಖಲೆ ರಾಣಿ ವಿಕ್ಟೋರಿಯಾ ಹೆಸರಲ್ಲೇ ಇದೆ. ಆಕೆ 64 ವರ್ಷ ಆಳ್ವಿಕೆ ನಡೆಸಿದ್ದಳು. ಈಗಿನ ರಾಣಿಯು 2015ರ ಸೆಪ್ಟೆಂಬರ್ 9ರವರೆಗೂ ರಾಜ್ಯಭಾರ ನಡೆಸಿದಲ್ಲಿ, ಆಕೆಯ ಮುತ್ತಜ್ಜಿ, ರಾಣಿ ವಿಕ್ಟೋರಿಯಾಳ ದಾಖಲೆಯೂ ಮುರಿಯುವ ಸಾಧ್ಯತೆಗಳಿವೆ.
|