ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿರುವ ವಯೋವೃದ್ಧ ಕ್ಯೂಬಾ ನಾಯಕ ಫಿಡೆಲ್ ಕ್ಯಾಸ್ಟ್ರೊ ರಾಜಕೀಯ ನಿವೃತ್ತಿ ಘೋಷಿಸುವ ಕುರಿತು ಸೂಚನೆ ನೀಡಿದ್ದಾರೆ.
16 ತಿಂಗಳಿಂದ ಸಾರ್ವಜನಿಕವಾಗಿ ಕಾಣಿಸಿಕೊಳ್ಳದ ಕ್ಯಾಸ್ಟ್ರೊ, ಹಾಸಿಗೆ ಹಿಡಿದ ಬಳಿಕ ಮೊತ್ತಮೊದಲ ಬಾರಿಗೆ ನಿವೃತ್ತಿಯ ಮಾತನ್ನು ಆಡಿದ್ದು, ಔಪಚಾರಿಕವಾಗಿರುವ ನಾಯಕತ್ವವನ್ನು ತೊರೆಯುವ ಸುಳಿವು ನೀಡಿದ್ದಾರೆ.
ಯಾವುದೇ ಸ್ಥಾನಮಾನಗಳನ್ನು ಹೊಂದದಿರುವುದು ಮತ್ತು ಯುವಜನತೆಯ ಹಾದಿಗೆ ಅಡ್ಡಬರದಿರುವುದು ತನ್ನ ಕರ್ತವ್ಯ ಎಂದು 81ರ ಹರೆಯದ ಕ್ಯಾಸ್ಟ್ರೋ ಕ್ಯೂಬಾದ ರಾಷ್ಟ್ರೀಯ ದೂರದರ್ಶನಕ್ಕೆ ಬರೆದಿರುವ ಪತ್ರದಲ್ಲಿ ಹೇಳಿದ್ದಾರೆ.
ಅನಾರೋಗ್ಯ ಹಾಗೂ ಮುಪ್ಪಿನಿಂದ ಜರ್ಜರಿತರಾಗಿರುವ ಕ್ಯಾಸ್ಟ್ರೊ, 2006ರಲ್ಲಿ ಕರುಳಿನ ಶಸ್ತ್ರಕ್ರಿಯೆಗೆ ಒಳಗಾಗುವ ಮುನ್ನ ತನ್ನ ಅಧಿಕಾರವನ್ನು ತಾತ್ಕಾಲಿಕವಾಗಿ ತನ್ನ ಕಿರಿಯ ಸಹೋದರ ರೌಲ್ ಕ್ಯಾಸ್ಟ್ರೊಗೆ ವಹಿಸಿದ್ದರು.
ಅಮೆರಿಕಾಗೆ ಸಡ್ಡು ಹೊಡೆದಿರುವ ಕ್ಯಾಸ್ಟ್ರೋ, 1959ರ ಕ್ರಾಂತಿಯಲ್ಲಿ ಅಧಿಕಾರಕ್ಕೇರಿದ್ದರು. ಶೀತಲ ಯುದ್ಧದಲ್ಲಿ ಪ್ರಮುಖ ಪಾತ್ರ ವಹಿಸಿರುವ ಬದುಕುಳಿದರವಲ್ಲಿ ಕೊನೆಯವರಾಗಿದ್ದು, ತನ್ನ ಜೀವನಾನುಭವಗಳನ್ನು ಮತ್ತು ಕಲ್ಪನೆ, ಆದರ್ಶಗಳನ್ನು ಧಾರೆಎರೆಯುವುದು ತನ್ನ ಕರ್ತವ್ಯ ಎಂದು ಅವರು ಹೇಳಿದ್ದಾರೆ.
ಮಾರ್ಚ್ ತಿಂಗಳಲ್ಲಿ ನಡೆಯಲಿರುವ ಕಾರ್ಯಕಾರಿ ಮಂಡಳಿಯ ಸದಸ್ಯರ ಅಧಿವೇಶನಲ್ಲಿ ಕ್ಯೂಬಾದ ರಾಷ್ಟ್ರೀಯ ಅಸ್ಸೆಂಬ್ಲಿಯು ಕ್ಯಾಸ್ಟ್ರೊ ಅವರ ನಿವೃತ್ತಿಯನ್ನು ಅಧಿಕೃತವಾಗಿಸಬಹುದು. ಕ್ಯಾಸ್ಟ್ರೊ ಅವರು ರಾಷ್ಟ್ರೀಯ ಮಂಡಳಿಯ ಹಾಗೂ ಮಂತ್ರಿ ಮಂಡಳದ ಅಧ್ಯಕ್ಷತೆ, ಮತ್ತು ಆಡಳಿತಾರೂಢ ಕಮ್ಯೂನಿಸ್ಟ್‌ನ ಪ್ರಥಮ ಕಾರ್ಯದರ್ಶಿಯಾಗಿದ್ದಾರೆ.
|