ಕಳೆದ ನವೆಂಬರ್ ತಿಂಗಳಿನಲ್ಲಿ ಶ್ರೀಲಂಕಾ ವಾಯುಪಡೆಯು ನಡೆಸಿದ ವಾಯುದಾಳಿಯ ಸಂದರ್ಭದಲ್ಲಿ ಎಲ್‌ಟಿಟಿಇ ನಾಯಕ ವೇಲುಪಿಳ್ಳೈ ಪ್ರಭಾಕರನ್ ಗಾಯಗೊಂಡಿದ್ದಾರೆ ಎಂದು ಶ್ರೀಲಂಕಾ ಸರಕಾರ ಖಚಿತಪಡಿಸಿದೆ.
ಕಿಲಿನೊಚ್ಚಿಯ ಜಯಂತಿನಗರದಲ್ಲಿ ನವೆಂಬರ್ 26 ರಂದು ಸಂಜೆ 5.25 ರ ಸುಮಾರು ಬಂಕರ್ ಸಂಕೀರ್ಣದ ಮೇಲೆ ಶ್ರೀಲಂಕಾದ ವಾಯುಪಡೆಗಳು ನಾಲ್ಕು ಯುದ್ದ ವಿಮಾನಗಳ ಮೂಲಕ ದಾಳಿ ನಡೆಸಿದಾಗ ಎಲ್‌ಟಿಟಿಇ ನಾಯಕ ವೇಲುಪಿಳ್ಳೈ ಪ್ರಭಾಕರನ್ ಅವರು ಗಾಯಗೊಂಡಿದ್ದಾರೆ ಎಂದು ಗುಪ್ತಚರ ಮೂಲಗಳು ಖಚಿತಪಡಿಸಿವೆ ಎಂದು ರಕ್ಷಣಾ ಸಚಿವಾಲಯವು ತಿಳಿಸಿದೆ.
ಬಂಕರ್ ಮೇಲೆ ವಾಯುದಾಳಿಯು ನಡೆಸಿದಾಗ ಪ್ರಭಾಕರನ್ ಅಲ್ಲಿಯೇ ಗಾಯಗೊಂಡಿದ್ದರು ಎಂದು ಗುಪ್ತಚರವು ಮಾಹಿತಿ ನೀಡಿದೆ ಎಂದು ಸಚಿವಾಲಯ ಹೇಳಿದೆ.
ನವೆಂಬರ್ 26 ರಂದು ಎಲ್‌ಟಿಟಿಇ ನಾಯಕ ಪ್ರಭಾಕರನ್‌ನ್ನು ಗುರಿಯಾಗಿಸಿಕೊಂಡು ನಡೆಸಿದ ವಾಯುದಾಳಿಯು ಯಶಸ್ವಿಯಾಗಿತ್ತು ಎಂದು ಅದು ಹೇಳಿದೆ.
ಇದೇ ಗುರಿಯನ್ನಿಟ್ಟುಕೊಂಡು ಲಂಕಾ ವಾಯುಪಡೆಯು ನವೆಂಬರ್ 28 ರಂದು ಮತ್ತೊಂದು ವಾಯುದಾಳಿಯನ್ನು ನಡೆಸಿತ್ತು.
ಶ್ರೀಲಂಕಾ ವಾಯುಪಡೆಯು ನಡೆಸಿರುವ ದಾಳಿಯು ಯಶಸ್ವಿಯಾಗಿದ್ದು, ಆ ಸಂದರ್ಭದಲ್ಲಿ ಹಲವಾರು ಎಲ್‌ಟಿಟಿಇ ಉಗ್ರರು ಮೃತಪಟ್ಟಿದ್ದರು. ಅದೇ ಸಂದರ್ಭದಲ್ಲಿ ಬಂಡುಕೋರರ ನಾಯಕ ಕೂಡ ಗಾಯಗೊಂಡಿರುವುದು ಈಗ ಖಚಿತವಾಗಿದೆ ಎಂದು ರಕ್ಷಣಾ ಇಲಾಖೆ ತಿಳಿಸಿದೆ.
ಲಂಕಾ ವಾಯುದಾಳಿಯ ಸಂದರ್ಭದಲ್ಲಿ ಬಂಡುಕೋರ ನಾಯಕ ಪ್ರಭಾಕರನ್ ಗಾಯಗೊಂಡಿರುವುದು ನಮಗೆ ಖಚಿತವಾದ ಮಾಹಿತಿ ಇನ್ನೂ ದೊರೆತಿರಲಿಲ್ಲ. ಹೀಗಾಗಿ ಸರಕಾರವು ಈ ಮಾಹಿತಿಯನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡುವುದರಿಂದ ತಡೆಹಿಡಿಯಲಾಗಿತ್ತು ಎಂದು ಸಚಿವಾಲಯವು ವಿವರಿಸಿತು.
ನವೆಂಬರ್ 28 ರಂದು ಲಂಕಾ ವಾಯುಪಡೆಯ ದಾಳಿಗೆ ಎಲ್‌ಟಿಟಿಇ ಬಂಡುಕೋರರ ನಾಯಕ ಪ್ರಭಾಕರನ್ ಗಾಯಗೊಂಡಿದ್ದಾರೆ ಎಂದು ಇತ್ತೀಚೆಗೆ ಲಂಕಾದ ರಾಷ್ಟ್ರೀಯ ಪತ್ರಿಕೆಯೊಂದು ವರದಿ ಮಾಡಿತ್ತು. ಆದರೆ, ಇದನ್ನು ಎಲ್‌ಟಿಟಿಇ ತೀವ್ರವಾಗಿ ಖಂಡಿಸಿತ್ತು.
|