ಈದ್ ಉಲ್ ಜುಹಾ ಹಬ್ಬದ ಪ್ರಯುಕ್ತ ಮಸೀದಿಗೆ ಪ್ರಾರ್ಥನೆ ಸಲ್ಲಿಸಲು ಆಗಮಿಸುತ್ತಿದ್ದ ಪಾಕ್ ಮಾಜಿ ಆಂತರಿಕ ಸಚಿವ ಅಫ್ತಾಬ್ ಅಹ್ಮದ್ ಶರ್ಪಾವೊ ಅವರನ್ನು ಗುರಿಯಾಗಿಸಿಕೊಂಡು ಮಸೀದಿಯ ಹೊರಭಾಗದಲ್ಲಿ ಶುಕ್ರವಾರ ಬೆಳಗ್ಗೆ ಸಂಭವಿಸಿದ ಆತ್ಮಹತ್ಯಾ ಬಾಂಬ್ ಸ್ಫೋಟ 54 ಮಂದಿ ಮೃತಪಟ್ಟಿದ್ದಾರೆ. ಈ ಘಟನೆಯಿಂದ ಮಾಜಿ ಸಚಿವರು ಅಪಾಯದಿಂದ ಪಾರಾಗಿದ್ದಾರೆ.
ಈ ದುರ್ಘಟನೆಯಲ್ಲಿ ಹಲವಾರು ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಮಾಜಿ ಸಚಿವ ಅಫ್ತಾಬ್ಖಾನ್ ಶರ್ಪಾವೊ ಅವರ ಅಧಿಕೃತ ನಿವಾಸದ ಆವರಣಕ್ಕೆ ಹತ್ತಿಕೊಂಡಿರುವ ಮಸೀದಿಗೆ ನೂರಾರು ಮಂದಿ ಹಬ್ಬದ ಪ್ರಯುಕ್ತ ಪ್ರಾರ್ಥನೆ ಸಲ್ಲಿಸಲು ಅಲ್ಲಿಗೆ ಆಗಮಿಸುತ್ತಿದ್ದಂತೆ ಈ ಸ್ಫೋಟ ಸಂಭವಿಸಿದೆ.
ಪ್ರಾರ್ಥನೆ ನಡೆಸುವ ಸಂದರ್ಭದಲ್ಲಿ ಈ ದುರ್ಘಟನೆಯು ಸಂಭವಿಸಿದ್ದು, ಇದರಲ್ಲಿ ನನ್ನ ಮಗ ಹಾಗೂ ಸಹೋದರನ ಮಕ್ಕಳು ಗಾಯಗೊಂಡಿದ್ದಾರೆ ಎಂದು ಶರ್ಪಾವೊ ವರದಿಗಾರರಿಗೆ ತಿಳಿಸಿದ್ದಾರೆ.
ಆತ್ಮಹತ್ಯಾ ದುರ್ಘಟನೆಯಲ್ಲಿ ಸುಮಾರು 54 ಮಂದಿ ಮೃತಪಟ್ಟಿದ್ದಾರೆ ಎಂದು ಚರ್ಸಾಡ್ಡಾದ ಪೊಲೀಸ್ ವರಿಷ್ಠಾಧಿಕಾರಿ ಫಿರೋಜ್ ಶಾ ಹೇಳಿದ್ದಾರೆ.
ಈ ದುರ್ಘಟನೆಯಲ್ಲಿ ಇನ್ನೂ ಅಧಿಕ ಮಂದಿ ಗಾಯಗೊಂಡಿದ್ದು, ಅವರ ಶೋಧನೆ ಇನ್ನೂ ನಡೆಯುತ್ತಲೇ ಇದೆ ಎಂದು ಪ್ರಾಂತೀಯ ಪೊಲೀಸ್ ಮುಖ್ಯಸ್ಥ ಶರೀಫ್ ವರ್ಕ್ ಹೇಳಿದ್ದಾರೆ.
ಕಳೆದ ಎಂಟು ತಿಂಗಳ ಹಿಂದೆ ಶರ್ಪಾವೊ ಅವರನ್ನು ಗುರಿಯಾಗಿಸಿಕೊಂಡು ಆತ್ಮಹತ್ಯೆ ನಡೆಸಲಾಗಿತ್ತು. ಅದಾದ ನಂತರ ಇದು ಎರಡನೇ ಯತ್ನವಾಗಿದೆ ಎಂದ ಪೊಲೀಸ್ ಮುಖ್ಯಸ್ಥ, ಈ ದುಷ್ಕೃತ್ಯದ ಹಿಂದೆ ಯಾರಿದ್ದಾರೆ ಎಂಬುದು ಇನ್ನೂ ಖಚಿತವಾಗಿಲ್ಲ. ಆದರೆ, ಈ ಹಿಂದೆ ನಡೆದ ದುರ್ಘಟನೆಗೆ ಇದು ಸಂಬಂಧವಾಗಿದ್ದು, ದೇಶದಲ್ಲಿ ಮುಂದೆ ನಡೆಯಲಿರುವ ಸಂಸತ್ ಚುನಾವಣೆಯಲ್ಲಿ ಅವರು ಪಾಲ್ಗೊಳ್ಳುತ್ತಿರುವುದನ್ನು ಪ್ರಮುಖವಾಗಿರಿಸಿಕೊಂಡು ಅವರ ಮೇಲೆ ಈ ದಾಳಿ ನಡೆಸಲು ಯತ್ನಿಸಲಾಗಿದೆ ಎಂದರು. . ಪ್ರಾರ್ಥನೆ ಮಾಡುವ ಸಂದರ್ಭದಲ್ಲಿ ಈ ಆತ್ಮಹತ್ಯಾ ಬಾಂಬ್ ಸ್ಫೋಟಗೊಂಡಿದೆ ಎಂದು ವರ್ಕ್ ಅವರು ಸುದ್ದಿಸಂಸ್ಥೆಗೆ ತಿಳಿಸಿದರು.
ಈ ದುರ್ಘಟನೆಯಲ್ಲಿ ಗಾಯಗೊಂಡವರನ್ನು ಪಾಕಿಸ್ತಾನದ ವಾಯುವ್ಯ ಪ್ರಾಂತ್ಯದ ರಾಜಧಾನಿ ಪೇಶಾವರ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
|