ನ್ಯೂಜಿಲೆಂಡ್‌ನಲ್ಲಿ ಗುರುವಾರ ರಾತ್ರಿ ಪ್ರಬಲ ಭೂಕಂಪನ ಸಂಭವಿಸಿದ ಪರಿಣಾಮ, ಉತ್ತರ ದ್ವೀಪದ ಕರಾವಳಿ ತೀರದಲ್ಲಿರುವ ಕನಿಷ್ಠ ಮೂರು ಹಳೆಯ ಕಟ್ಟಡಗಳು ಧ್ವಂಸಗೊಂಡಿವೆ.
ಕಂಪನದಿಂದಾಗಿ ಸಣ್ಣ ಅಗ್ನಿಯ ಕಣಗಳು ಕಿಡಿಯಾಗಿ ಹೊರಹೊಮ್ಮುತ್ತಿರುವುದರಿಂದ ಆ ಪ್ರದೇಶದಲ್ಲಿ ರಾಜ್ಯ ತುರ್ತು ಪರಿಸ್ಥಿತಿಯನ್ನು ಘೋಷಿಸಿದೆ.
ಭೂಕಂಪನದಿಂದ ಅತಿ ಆಘಾತಕ್ಕೆ ಒಳಗಾಗಿರುವ ಗಿಸ್ಬೊರ್ನ್ ಬಂದರು ಪ್ರದೇಶದಲ್ಲಿ 11 ಮಂದಿ ಸಣ್ಣ ಪುಟ್ಟ ಗಾಯಕ್ಕೆ ಒಳಗಾಗಿರುವ ಕುರಿತು ವರದಿಯಾಗಿದೆ ಹಾಗೂ ದೇಶಾದ್ಯಂತ ಸಾಕಷ್ಟು ಪ್ರಮಾಣದ ಆಸ್ತಿ ಪಾಸ್ತಿ ಹಾನಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಉತ್ತರ ದ್ವೀಪದಲ್ಲಿರುವ ಹಿಕುರಾಂಗಿ ಆಳಸಮುದ್ರದ ಮಧ್ಯಭಾಗದಲ್ಲಿ ಸುಮಾರು 25 ಮೈಲುಗಳು ಹಾಗೂ ನೈರುತ್ಯ ಗಿಸ್ಬೊರ್ನ್ ಪ್ರದೇಶದಲ್ಲಿ 30 ಮೈಲುಗಳವರೆಗೆ 6.8 ರಿಕ್ಟರ್ ಮಾಪಕದ ಭೂಕಂಪನವು ಗುರುವಾರ ರಾತ್ರಿ 8.55 ಕ್ಕೆ (ಭಾರತೀಯ ಕಾಲಮಾನ ಬೆಳಗಿನ ಜಾವ 2.55) ಸಂಭವಿಸಿದೆ ಎಂದು ಅಲ್ಲಿನ ಭೂಗರ್ಭಶಾಸ್ತ್ರಜ್ಞರು ಹೇಳಿದ್ದಾರೆ.
ಆದರೆ, ನ್ಯೂಜಿಲೆಂಡ್‌ನಲ್ಲಿ ಸಂಭವಿಸಿದ ಭೂಕಂಪನವು 6.6 ರಿಕ್ಟರ್ ಮಾಪಕದಷ್ಟಿತ್ತು ಎಂದು ಅಮೆರಿಕದ ಭೂಗರ್ಭ ಸಮೀಕ್ಷಾ ವಿಜ್ಞಾನಿಗಳು ವರದಿ ನೀಡಿದ್ದಾರೆ.
ಹವಾಯಿಯಲ್ಲಿರುವ ಪೆಸಿಫಿಕ್ ಸುನಾಮಿ ಮುನ್ನೆಚ್ಚರಿಕಾ ಕೇಂದ್ರವು ಸುನಾಮಿ ಭೀತಿಯನ್ನು ನೀಡಿಲ್ಲ ಎಂದು ಮಾಧ್ಯಮ ಏಜೆನ್ಸಿಯು ತಿಳಿಸಿದೆ.
ಕಂಪನದಿಂದಾಗಿ ಗಿಸ್ಬೊರ್ನ್‌ನ ರಸ್ತೆಯುದ್ದಕ್ಕೂ ಹಾಗೂ ಈ ಪ್ರದೇಶದ ಬಹುತೇಕ ಭಾಗಗಳಲ್ಲಿ ವಿದ್ಯುತ್ ಸ್ಥಗಿತಗೊಳಿಸಲಾಗಿತ್ತು ಎಂದು ಅಲ್ಲಿನ ಅಧಿಕಾರಿಗಳು ತಿಳಿಸಿದ್ದಾರೆ.
|