ಕಳೆದ ತಿಂಗಳು ಕಿಲಿನೋಚಿಯಲ್ಲಿ ನಡೆದ ಸೇನಾಪಡೆಗಳ ವೈಮಾನಿಕ ದಾಳಿಯಲ್ಲಿ ತಮಿಳು ಉಗ್ರರ ನಾಯಕ ವೆಲ್ಲುಪಿಳ್ಳೆ ಪ್ರಭಾಕರನ್ ಗಾಯಾಳುವಾಗಿದ್ದಾರೆ ಎನ್ನುವ ವರದಿಗಳಲ್ಲಿ ಸತ್ಯಾಂಶವಿಲ್ಲ ಎಂದು ಎಲ್‌ಟಿಟಿಇ ತಳ್ಳಿಹಾಕಿದೆ.
ನಮ್ಮ ನಾಯಕ ಸೂರ್ಯನಿದ್ದಂತೆ. ಅವರನ್ನು ಕೊನೆಗಾಣಿಸಲು ಯೋಚನೆ ಮಾಡುವುದು ಸಾಧ್ಯವಿಲ್ಲ. ದಾಳಿ ನಡೆಯುವಂತಹ ಸ್ಥಳಗಳಲ್ಲಿ ನಮ್ಮ ನಾಯಕನನ್ನು ಇರಿಸಲು ಸಾಧ್ಯವಿಲ್ಲದ ಮಾತು. ಅವರ ಮುಂದಾಳತ್ವದಲ್ಲಿ ನಾವು ಮುನ್ನಡೆಯುತ್ತಿದ್ದವೆ. ಅವರು ಗಾಯಾಳುವಾಗಿಲ್ಲ ಎಂದು ಉಗ್ರರ ವಕ್ತಾರ ಹೇಳಿದ್ದಾರೆ.
ಕಳೆದ ಮೂರು ದಿನಗಳ ಹಿಂದೆ ನಾನು ಸಹೋದರ ಪ್ರಭಾಕರನ್ ಅವರನ್ನು ಭೇಟಿಯಾಗಿದ್ದು ಅವರ ಆರೋಗ್ಯ ಉತ್ತಮವಾಗಿದೆ. ನವೆಂಬರ್ 27, 28 ರಂದು ಸೇನೆಯ ವೈಮಾನಿಕ ದಾಳಿ ನಡೆದಿದ್ದು, ದಿನನಿತ್ಯ ಘರ್ಷಣೆ ನಡೆಯುವಾಗ ನಿಖರವಾಗಿ ನೆನಪಿರುವುದಿಲ್ಲ ಎಂದು ವಕ್ತಾರರು ತಿಳಿಸಿದ್ದಾರೆ.
ಆದರೆ ಸೇನೆಯ ಗುಪ್ತಚರ ದಳ ತಮಿಳು ಉಗ್ರರ ನಾಯಕ ಪ್ರಭಾಕರನ್ ವೈಮಾನಿಕ ದಾಳಿಯಲ್ಲಿ ಬಲತೋಳಿಗೆ ಅಲ್ಪ ಗಾಯವಾಗಿರಬಹುದು ಎಂದು ಡೈಲಿ ಮಿರರ್‌ಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದೆ.
ಸೇನಾಪಡೆಗಳ ವೈಮಾನಿಕ ದಾಳಿಯ ಸಂದರ್ಭದಲ್ಲಿ ಪ್ರಬಾಕರನ್ ಅಡಗಿದ್ದ ಭೂಗತ ಬಂಕರ್ ಅಲ್ಪ ನಾಶವಾಗಿ ಪ್ರಭಾಕರನ್ ಅವರ ಬಲತೋಳಿನ ಮೇಲೆ ಬಿದ್ದಿರುವುದರಿಂದ ಗಾಯವಾಗಿದೆ ಎಂದು ಪತ್ರಿಕೆಯೊಂದು ವರದಿ ಮಾಡಿದೆ.
|