ಟರ್ಕಿಯ ಯುದ್ಧವಿಮಾನಗಳು ಉತ್ತರ ಇರಾಕಿನ ಕುರ್ದಿ ಬಂಡುಕೋರರ ನೆಲೆಗಳ ಮೇಲೆ ಬಾಂಬ್ ದಾಳಿ ಮಾಡಿದ ಘಟನೆ ನಡೆದಿದೆ ಎಂದು ಇರಾಕಿ ಕುರ್ದಿಸ್ತಾನದ ಪೇಶಮರ್ಜಾ ಭದ್ರತಾ ಪಡೆಯ ವಕ್ತಾರ ತಿಳಿಸಿದ್ದಾರೆ. ಟರ್ಕಿಯ ಗಡಿಯ ಬಳಿಯ ಇರ್ಬಿಲ್‌ಗೆ 85 ಕಿಮೀ ದೂರದ ಪ್ರದೇಶದ ಮೇಲೆ ಜೆಟ್ ವಿಮಾನಗಳು ಒಂದೂವರೆ ಗಂಟೆಗಳ ಕಾಲ ಬಾಂಬ್ ದಾಳಿ ನಡೆಸಿದವು.
ಟರ್ಕಿಯ ದಾಳಿಗಳ ಭಯದಿಂದ ಆ ಪ್ರದೇಶವು ನಿರ್ಜನವಾಗಿದ್ದರಿಂದ ಯಾರೇ ನಾಗರಿಕರು ಸತ್ತಿಲ್ಲವೆಂದು ಅವರು ಹೇಳಿದ್ದಾರೆ. ಗಡಿಯಾಚೆ ಕಾರ್ಯಾಚರಣೆ ಕುರಿತು ಪ್ರಧಾನ ಮಂತ್ರಿ ಟೈಯಿಪ್ ಎರ್ಡೋಗನ್ ಅವರನ್ನು ಪತ್ರಕರ್ತರು ಪ್ರಶ್ನಿಸಿದಾಗ ನಾವು ಅಂತಾರಾಷ್ಟ್ರೀಯ ಕಾನೂನಿನ ಅಡಿಯಲ್ಲಿ ರಾಷ್ಟ್ರದ ಸ್ವಾಭಾವಿಕ ಹಕ್ಕನ್ನು ಬಳಸುತ್ತಿದ್ದೇವೆ ಎಂದು ಹೇಳಿದರು.
ಅಮೆರಿಕದ ರಾಯಭಾರಿಯಾಗಿರುವ ರಯಾನ್ ಕ್ರೋಕರ್, ತನ್ನ ರಾಷ್ಟ್ರವನ್ನು ರಕ್ಷಿಸಿಕೊಳ್ಳುವ ಟರ್ಕಿಯ ಹಕ್ಕನ್ನು ಅಮೆರಿಕ ಒಪ್ಪಿಕೊಂಡರೂ, ಇರಾಕ್ ಸ್ಥಿರತೆಗೆ ಧಕ್ಕೆ ತರದಂತೆ ಅಮೆರಿಕದ ಮಿತ್ರ ರಾಷ್ಟ್ರಕ್ಕೆ ಎಚ್ಚರಿಸಿದ್ದಾರೆ. ಇರಾಕ್ ಸ್ಥಿರತೆ ಬಗ್ಗೆ ನಾವು ಗಣನೀಯ ಆಸಕ್ತಿ ಹೊಂದಿದ್ದು. ಇರಾಕ್ ಮೂಲ ಸ್ಥಿರತೆಗೆ ಧಕ್ಕೆಯಾಗದಂತೆ ಟರ್ಕಿ ಕಾರ್ಯಾಚರಣೆ ನಡೆಸುವುದು ಒಳ್ಳೆಯದೆಂದು ಅವರು ಹೇಳಿದ್ದಾರೆ.
|