ಶ್ರೀಲಂಕಾ ಸೇನಾ ಪಡೆ ಮತ್ತು ಎಲ್‌ಟಿಟಿಇ ಉಗ್ರರ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಒಟ್ಟು 30 ಮಂದಿ ಸಾವಿಗೀಡಾಗಿದ್ದಾರೆ ಎಂದು ಶ್ರೀಲಂಕಾ ರಕ್ಷಣಾ ಸಚಿವಾಲಯ ತಿಳಿಸಿದೆ.
ಉಗ್ರರು ಮತ್ತು ಸೇನೆ ನಡುವೆ ಎಡಬಿಡದೇ ನಡೆದ ಗುಂಡಿನ ಕಾಳಗದಲ್ಲಿ 28 ಉಗ್ರರು ಮತ್ತು 2 ರಕ್ಷಣಾ ಪಡೆಯ ಯೋಧರು ಮೃತರಾಗಿರುವ ತಿಳಿದುಬಂದಿದೆ. ಕದುರುವಿಟ್ಟಂಕುಲಮ್‌ನಲ್ಲಿ ನಡೆದ ಕಾಳಗದಲ್ಲಿ ಮೂವರು ಉಗ್ರರು ಹತರಾದರೆ, ನಾಲ್ವರು ಶರಣಾಗಿದ್ದಾರೆ. ಇದೇ ವೇಳೆ ಒಬ್ಬ ಯೋಧ ಗಾಯಗೊಂಡಿದ್ದಾನೆ.
ವಿಲಂತಿಕುಲಮ್‌ನಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ 3 ಬಂಡುಕೋರರು ಸಾವಿಗೀಡಾಗಿದ್ದರೆ, ಇತರ ಏಳು ಮಂದಿ ಗಾಯಗೊಂಡಿದ್ದಾರೆ. ಜಾಪ್ನಾದಲ್ಲಿ ಓರ್ವ ಮಡಿದರೆ, ವಾಯುವ್ಯ ಮನ್ನಾರ್‌ನಲ್ಲಿ ನಡೆದ ಜಗಳದಲ್ಲಿ ಎಂಟು ಮಂದಿ ಮೃತರಾಗಿದ್ದಾರೆ.
ಪಲೈಕುಲಿಯಲ್ಲಿ ನಡೆದ ಘರ್ಷಣೆಯಲ್ಲಿ ಮತ್ತೋರ್ವ ಜವಾನ ಹತನಾದರೆ, ಐದು ಮಂದಿ ಉಗ್ರರು ಸತ್ತಿದ್ದಾರೆ. ತತ್ತಾಕುಲೈ ಪ್ರದೇಶದಲ್ಲಿ ಜವಾನ ಗಾಯಗೊಂಡಿದ್ದಾನೆ ಎಂದು ರಕ್ಷಣಾ ಸಚಿವಾಲಯ ವರದಿ ನೀಡಿದೆ.
|