ನೇಪಾಳ ಪ್ರಧಾನಮಂತ್ರಿ ಗಿರಿಜಾ ಪ್ರಸಾದ್ ಕೊಯಿರಾಲಾ ಅವರ ಸರಕಾರದ ಜತೆ ಕೈಜೋಡಿಸಲು ಮಾವೋವಾದಿಗಳು ನಿರ್ಧರಿಸಿದ್ದಾರೆ. ಇದರಿಂದಾಗಿ ಶಾಂತಿಪ್ರಕ್ರಿಯೆಯು ಪುನಃ ಹಳಿಯ ಮೇಲೆ ಬಂದಂತಾಗಿದೆ. ಭಾನುವಾರ ರಾತ್ರಿ ಎರಡೂ ಪಕ್ಷಗಳ ಮುಖಂಡರು ಸಭೆ ಸೇರಿ 22 ಅಂಶಗಳ ಒಪ್ಪಂದಕ್ಕೆ ಸಹಿ ಹಾಕಿದರು. ಮುಂದಿನ ವರ್ಷ ಏಪ್ರಿಲ್‌ನಲ್ಲಿ ಚುನಾವಣೆ ನಡೆಸಬೇಕು ಮತ್ತು ನೇಪಾಳವನ್ನು ಒಕ್ಕೂಟ ಪ್ರಜಾತಂತ್ರ ಗಣರಾಜ್ಯ ಎಂದು ಮಧ್ಯಂತರ ಸಂಸತ್ತಿನ ಮೂಲಕ ಘೋಷಿಸಬೇಕು ಎಂದು 22 ಅಂಶಗಳ ಒಪ್ಪಂದದಲ್ಲಿ ಉಲ್ಲೇಖಿಸಲಾಗಿದೆ.
ಮಾಜಿ ಮಾವೋವಾದಿ ಬಂಡುಕೋರರ ಜತೆ ಶಾಂತಿ ಒಪ್ಪಂದದಿಂದಾಗಿ ಶತಮಾನಗಳ ಹಿನ್ನೆಲೆಯ ರಾಜಪ್ರಭುತ್ವ ರದ್ದಾಗುವುದನ್ನು ಸರ್ಕಾರ ಕಾಣಲಿದೆ. ಏಪ್ರಿಲ್ 2008ರಲ್ಲಿ ಚುನಾವಣೆ ನಡೆದ ಬಳಿಕ ನೇಪಾಳವನ್ನು ಒಕ್ಕೂಟ ಜನತಾಂತ್ರಿಕ ಗಣರಾಜ್ಯವೆಂದು ಘೋಷಿಸಲಾಗುವುದು.
ಮೂರು ತಿಂಗಳ ರಾಜಕೀಯ ಕ್ಷೋಭೆಯ ಬಳಿಕ ಮಾವೋವಾದಿಗಳು ರಾಜಪ್ರಭುತ್ವವನ್ನು ತಕ್ಷಣವೇ ರದ್ದುಮಾಡಬೇಕೆಂದು ಆಗ್ರಹಿಸಿ ಸರ್ಕಾರಕ್ಕೆ ರಾಜೀನಾಮೆ ನೀಡಿದ್ದರು. ಇದು ಸಂವಿಧಾನಿಕ ಅಸೆಂಬ್ಲಿ ಚುನಾವಣೆ ವಿಳಂಬಕ್ಕೆ ಕಾರಣವಾಗಿತ್ತು.ನುವಾರ ನಡೆದ ಮಾತುಕತೆಯು ಫಲಪ್ರದವಾಗಿದ್ದು, ಕಳೆದ ಒಂದು ದಶಕಗಳಿಂದ ಶಸ್ತ್ರಾಸ್ತ್ರಗಳನ್ನು ಹಿಡಿದುಕೊಂಡಿದ್ದ ಮಾವೊವಾದಿಗಳು ಸರಕಾರಕ್ಕೆ ಮರು ಸೇರ್ಪಡೆಯಾಗಲು ಒಪ್ಪಿಗೆ ಸೂಚಿಸಿದ್ದಾರೆ.
|