ಮುಂದಿನ ವರ್ಷ ಜನವರಿ 8 ರಂದು ನಡೆಯಲಿರುವ ಸಾರ್ವತ್ರಿಕ ಚುನಾವಣೆಯನ್ನು ಬಹಿಷ್ಕರಿಸುವುದಕ್ಕೆ ಚಳುವಳಿ ಹಮ್ಮಿಕೊಳ್ಳುವುದಾಗಿ ಪಾಕಿಸ್ತಾನದ ಧಾರ್ಮಿಕ ಹಾಗೂ ರಾಜಕೀಯ ವಿರೋಧ ಪಕ್ಷಗಳು ನಿರ್ಧರಿಸಿವೆ.
ಅಧ್ಯಕ್ಷ ಪರ್ವೇಜ್ ಮುಷರ್ರಫ್ ಅವರ ಅಡಿಯಲ್ಲಿ ಮುಂಬರಲಿರುವ ಚುನಾವಣೆಗಳು ಮುಕ್ತ ಹಾಗೂ ನ್ಯಾಯಯುತವಾಗಿ ನಡೆಯಲು ಸಾಧ್ಯವಿಲ್ಲ ಎಂದು ಸಾರಲು ಆಗ್ನೇಯ ಬಲೂಚಿಸ್ತಾನ ಪ್ರಾಂತ್ಯದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಇಮ್ರಾನ್ ಖಾನ್ ಅವರ ತೆಹ್ರೀಕ್ ಇ ಇನ್‌ಸಾಫ್ ಹಾಗೂ ಜಮಾತ್ ಇ ಇಸ್ಲಾಮಿ ಒಳಗೊಂಡಂತೆ ಸುಮಾರು 21 ರಾಜಕೀಯ ಪಕ್ಷಗಳನ್ನು ಹೊಂದಿರುವ ಆಲ್ ಪಾರ್ಟಿಸ್ ಡೆಮಾಕ್ರೆಟಿಕ್ ಅಲೈಯನ್ಸ್ (ಎಪಿಡಿಎಂ)ನ ನಾಯಕರು ತಿಳಿಸಿದ್ದಾರೆ.
ಚುನಾವಣೆಯನ್ನು ಬಹಿಷ್ಕರಿಸುವಂತೆ ಈ ಪ್ರಾಂತ್ಯದ ರಾಜಧಾನಿ ಕ್ವೆಟ್ಟಾದಿಂದ ಸುಮಾರು 70 ಕಿ.ಮೀ ದೂರದಲ್ಲಿರುವ ಪಿಷಿನ್ ಎಬ ನಗರದಲ್ಲಿ ನೂರಾರು ಕಾರ್ಯಕರ್ತರನ್ನು ಉದ್ದೇಶಿಸಿ ಅವರು ಮಾತನಾಡುತ್ತಿದ್ದರು.
ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ತೆಗೆದುಹಾಕಲಾಗಿದ್ದ ಸುಪ್ರೀಂಕೋರ್ಟ್‌ನ ನ್ಯಾಯಾಧೀಶರನ್ನು ಈಗಲೂ ಬಂಧನದಲ್ಲಿಡಲಾಗಿದೆ ಹಾಗೂ ಚುನಾವಣಾ ಆಯೋಗವು ಸ್ವತಂತ್ರವಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂದು ಎಪಿಡಿಎಂನ ಮುಖ್ಯಸ್ಥ ಮೆಹಮೂದ್ ಖಾನ್ ಅಚಕ್‌ಜೈ ಹೇಳಿದ್ದಾರೆ.
ದೇಶದಲ್ಲಿರುವ ವಿರೋಧ ಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಸರಕಾರವನ್ನು ಮುನ್ನಡೆಸಲು ಹಂಗಾಮಿ ಪ್ರಧಾನಿಯನ್ನು ಆಯ್ಕೆ ಮಾಡಲಾಗಿದೆ ಎಂದು ಅವರು ಇದೇ ಸಂದರ್ಭದಲ್ಲಿ ದೂರಿದರು.
ದೇಶದ ಹಾಗೂ ಜನತೆಯ ಹಿತಾಸಕ್ತಿಗಾಗಿ ಮುಂಬರಲಿರುವ ಚುನಾವಣೆಗಳನ್ನು ನಾವು ಬಹಿಷ್ಕರಿಸಲು ನಿರ್ಧರಿಸಿದ್ದೇವೆ. ಕೆಲವು ರಾಜಕೀಯ ಪಕ್ಷಗಳು ಚುನಾವಣೆಯಲ್ಲಿ ಪಾಲ್ಗೊಳ್ಳಲು ಉತ್ಸುಕವಾಗಿದ್ದರು, ಮುಕ್ತ ಚುನಾವಣೆ ನಡೆಯುತ್ತದೆ ಎನ್ನುವ ಕುರಿತು ಅನುಮಾನ ವ್ಯಕ್ತಪಡಿಸಿವೆ.
|