ನಾಝಿ ಮಾದರಿಯ ಸೆಲ್ಯೂಟ್ ನೀಡಲು ನಾಯಿಗೆ ಕಲಿಸಿದ ಜರ್ಮನ್ ವ್ಯಕ್ತಿಗೆ ಐದು ತಿಂಗಳ ಜೈಲು ಶಿಕ್ಷೆ ವಿಧಿಸಲಾಗಿದೆ.
ಬ್ರಿಟಿಷ್ ಟ್ಯಾಬ್ಲಾಯ್ಡ್ "ದಿ ಸನ್" ಪ್ರಕಾರ, ಹಿಟ್ಲರನ ಅಭಿಮಾನಿಯಾಗಿದ್ದ ಈ ವ್ಯಕ್ತಿ, "ಹಿಟ್ಲರನಿಗೆ ಜೈ" ಎಂಬ ಪದಗಳನ್ನು ಕೇಳಿದ ತಕ್ಷಣವೇ ಆ ನಾಯಿಯು ತನ್ನ ಕೈಯೆತ್ತಿ ಸೆಲ್ಯೂಟ್ ಹೊಡೆಯುವಂತೆ ಬುದ್ಧಿ ಕಲಿಸಿದ್ದ.
ರೊನಾಲ್ಡ್ ಟಿ. ಎಂಬ ಹೆಸರಿನ ಈತ, ತನ್ನ ನಾಯಿಗೆ ಅಡಾಲ್ಫ್ ಎಂಬ ಹೆಸರಿಟ್ಟಿದ್ದ. ಅಲ್ಲದೆ 1945ರಲ್ಲಿ ಹಿಟ್ಲರನ ಆತ್ಮಹತ್ಯೆಯ ವರ್ಷಾಚರಣೆಯ ದಿನದಂದು ಆ ನಾಯಿಯನ್ನು "ಗಾಢ ನಿದ್ದೆ"ಯಲ್ಲಿರಿಸುವ ಯತ್ನದಲ್ಲಿದ್ದ ಎಂದು ಟ್ಯಾಬ್ಲಾಯ್ಡ್ ವರದಿ ಮಾಡಿದೆ.
ಈ ನಾಯಿಯ ಚಾಕಚಕ್ಯತೆಯನ್ನು ಪೊಲೀಸರೆದುರು ಪ್ರದರ್ಶಿಸಲು ಹೋಗಿ ರೊನಾಲ್ಡ್ ಸಿಕ್ಕಿಬಿದ್ದಿದ್ದ. ಈಗ ನಾಯಿಯನ್ನು ಪಶುಸಂಗೋಪನೆಯ ತಾಣವೊಂದರಲ್ಲಿ ಇರಿಸಲಾಗಿದ್ದು, ಅದರ ಅಭ್ಯಾಸ ಬದಲಿಸಲು ಪ್ರಯತ್ನಿಸಲಾಗುತ್ತದೆ. ನಾಝಿ ಮಾದರಿಯ ಸೆಲ್ಯೂಟ್ ಬದಲು ಹಸ್ತ ಲಾಘವ ನೀಡುವಂತೆ ಅದನ್ನು ಪ್ರಚೋದಿಸಲಾಗುತ್ತಿದೆ.
ಆದರೆ, ತನ್ನ ಜೈಲು ಶಿಕ್ಷೆಯ ಅವಧಿ ಮುಗಿದ ಬಳಿಕ ಆ ನಾಯಿಯನ್ನು ತನಗೆ ಮರಳಿಸುತ್ತಾರೆಯೇ ಇಲ್ಲವೇ ಎಂಬ ಬಗ್ಗೆ ಈ ಜರ್ಮನ್ ವ್ಯಕ್ತಿ ಆತಂಕದಲ್ಲಿದ್ದಾನೆ. ಈ ಶಿಕ್ಷೆ ಯಾಕೆಂದರೆ, ನಾಝಿ ಮಾದರಿಯ ಸೆಲ್ಯೂಟನ್ನು ಜರ್ಮನಿಯಲ್ಲಿ ನಿಷೇಧಿಸಲಾಗಿದೆ.
|