ಪಾಕಿಸ್ತಾನದ ಪ್ರಕ್ಷುಬ್ಧಪೀಡಿತ ಬುಡಕಟ್ಟು ಪ್ರದೇಶವೊಂದರಲ್ಲಿ ಸಂಭವಿಸಿದ ಜನಾಂಗೀಯ ಹಿಂಸಾಚಾರದಲ್ಲಿ ಕನಿಷ್ಠ 30 ಮಂದಿ ಬಲಿಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದರಿಂದ ವಾರಾಂತ್ಯದಲ್ಲಿ ಸಂಭವಿಸಿದ ಘರ್ಷಣೆಗಳಲ್ಲಿ ಸತ್ತವರ ಸಂಖ್ಯೆ 43ಕ್ಕೇರಿದೆ.ಶಿಯಾ ಗುಂಪಿನ ಜನರು ಸದ್ದಾ ಗ್ರಾಮದ ಶಾಲೆಯ ಕಟ್ಟಡವೊಂದರಲ್ಲಿ ಆಶ್ರಯ ಪಡೆದಿದ್ದಾಗ ಮೋರ್ಟಾರ್ ಶಾಲೆಗೆ ಬಡಿದು ಮೂವರು ಮಕ್ಕಳು ಮತ್ತು ಒಬ್ಬ ಮಹಿಳೆ ಸೇರಿದಂತೆ ಐದು ಮಂದಿ ಸತ್ತಿದ್ದಾರೆಂದು ಸ್ಥಳೀಯ ಅಧಿಕಾರಿ ಮುಜಾಹಿದ್ ಖಾನ್ ತಿಳಿಸಿದ್ದಾರೆ.
ಮೋರ್ಟಾರ್ ಶೆಲ್ಲನ್ನು ಸುನ್ನಿ ಬುಡಕಟ್ಟು ಜನಾಂಗದವರು ತಾಲಿಬಾನ್ ಉಗ್ರರ ನೆರವಿನಿಂದ ಸಿಡಿಸಿದ್ದಾರೆಂದು ಹೇಳಲಾಗಿದೆ. ದುಷ್ಕರ್ಮಿಗಳು ಇದೇ ಪ್ರದೇಶದಲ್ಲಿ ಭದ್ರತಾ ಚೌಕಿ ಮೇಲೆ ರಾಕೆಟ್‌ಗಳನ್ನು ಹಾರಿಸಿ ಅರೆಮಿಲಿಟರಿ ಪಡೆಯ ಇಬ್ಬರು ಯೋಧರನ್ನು ಕೊಂದಿದ್ದಾರೆ.
ವಿವಿಧ ಗುಂಡಿನ ಚಕಮಕಿಗಳಲ್ಲಿ 10 ಜನರು ಸತ್ತಿದ್ದು. ನೆರೆಯ ಬುಡಕಟ್ಟು ಜಿಲ್ಲೆಗಳಿಂದ ಬಂದ 13 ತಾಲಿಬಾನ್ ಉಗ್ರರು ಕೂಡ ಮೃತರಾಗಿದ್ದಾರೆ.ಶಸ್ತ್ರಸಜ್ಜಿತ ಸುನ್ನಿ ಬುಡಕಟ್ಟು ಜನಾಂಗದವರು ಪಾರಾಚಿನಾರ್ ನಗರವನ್ನು ಪ್ರವೇಶಿಸಿದಾಗ ಘರ್ಷಣೆ ಭುಗಿಲೆದ್ದಿತು.
ಸುನ್ನಿ ಪಂಗಡದವರು ಶಿಯಾ ಮುಸ್ಲಿಮರ ಮನೆಗಳು ಮತ್ತು ಅಂಗಡಿಗಳಲ್ಲಿ ದಾಂಧಲೆ ನಡೆಸಿದರು. ಕನಿಷ್ಠ 13 ಜನರು ಹೋರಾಟದಲ್ಲಿ ಸತ್ತಿದ್ದಾರೆಂದು ವರದಿಯಾಗಿದೆ. ಕುರಾಮ್ ಜಿಲ್ಲೆಯು ಜನಾಂಗೀಯ ಹಿಂಸಾಚಾರದ ದೀರ್ಘ ಇತಿಹಾಸವನ್ನು ಹೊಂದಿದೆ. ವಾರವಿಡೀ ನಡೆದ ತೀವ್ರ ಘರ್ಷಣೆಗಳಲ್ಲಿ ಸುಮಾರು 150 ಜನರು ಸತ್ತಿದ್ದು, 400 ಮಂದಿ ಗಾಯಗೊಂಡಿದ್ದಾರೆ.
|