ಪಾಕಿಸ್ತಾನದ ವರ್ಚಸ್ವಿ ನಾಯಕಿ, ಮಾಜಿ ಪ್ರಧಾನಮಂತ್ರಿ ಬೇನಜೀರ್ ಭುಟ್ಟೊ ಅವರು ಗುರುವಾರ ರಾವಲ್ಪಿಂಡಿಯ ಪ್ರಚಾರ ಸಭೆಯಲ್ಲಿ ಭಾಷಣ ಮಾಡಿ ಹೊರಬರುವಾಗ ಗುಂಡಿನ ದಾಳಿ ಮತ್ತು ಆತ್ಮಹತ್ಯೆ ಬಾಂಬ್ ಸ್ಫೋಟಗಳು ಕೆಲವೇ ಕ್ಷಣಗಳ ಅಂತರದಲ್ಲಿ ಸಂಭವಿಸಿ, ಬೇನಜೀರ್ ಬಂದೂಕಿನಿಂದ ಹಾರಿಸಿದ ಗುಂಡಿನ ದಾಳಿಗೆ ಮೃತಪಟ್ಟಿದ್ದಾರೆ.
ಆತ್ಮಹತ್ಯೆ ಬಾಂಬ್ ಸ್ಫೋಟದಲ್ಲಿ 20 ಜನರು ಮೃತಪಟ್ಟಿದ್ದು, ಅನೇಕ ಮಂದಿ ಗಾಯಗೊಂಡಿದ್ದಾರೆ. ಐದು ಗುಂಡುಗಳನ್ನು ಬೇನಜೀರ್ ಅವರತ್ತ ಹಾರಿಸಲಾಗಿದ್ದು, ಒಂದು ಗುಂಡು ಅವರ ಕುತ್ತಿಗೆಯನ್ನು ಸೀಳಿಕೊಂಡು ಹೋಗಿದೆಯೆಂದು ವರದಿಗಳು ತಿಳಿಸಿವೆ. 54 ವರ್ಷದ ಪಾಕಿಸ್ತಾನ ಪೀಪಲ್ಸ್ ಪಕ್ಷದ ನಾಯಕಿಯನ್ನು ಕೂಡಲೇ ರಾವಲ್ಪಿಂಡಿಯ ಆಸ್ಪತ್ರೆಗೆ ಸೇರಿಸಲಾಯಿತಾದರೂ ಅಲ್ಲಿ ಅವರು ಕೊನೆಯುಸಿರೆಳೆದರು.
ಆತ್ಮಹತ್ಯೆ ಬಾಂಬರ್ ತನ್ನನ್ನು ಸ್ಫೋಟಿಸಿಕೊಳ್ಳುವ ಮುನ್ನವೇ ಕೆಲವು ವ್ಯಕ್ತಿಗಳು ಭುಟ್ಟೊ ಅವರು ಆಸೀನರಾಗಿದ್ದ ವಾಹನದತ್ತ ಗುಂಡುಹಾರಿಸಿದರೆಂದು ಪಿಪಿಪಿಯ ಭದ್ರತಾ ಸಲಹೆಗಾರ ತಿಳಿಸಿದ್ದಾರೆ. ಭುಟ್ಟೊ ಸಂಜೆ 6.16 ಗಂಟೆಗೆ ಅಸುನೀಗಿದರೆಂದು ಪಿಪಿಪಿ ಸದಸ್ಯ ವಾಸಿಫ್ ಅಲಿ ಖಾನ್ ತಿಳಿಸಿದ್ದಾರೆ. ಭುಟ್ಟೊ ತಮ್ಮ ಪತ್ನಿ ಅಸೀಫ್ ಅಲಿ ಜರ್ದಾರಿ ಮತ್ತು ಮೂರು ಮಕ್ಕಳನ್ನು ಅಗಲಿದ್ದಾರೆ.
ಭುಟ್ಟೊ ಅವರ ಅಮಾನುಷ ಹತ್ಯೆಯು ವಿಶ್ವಾದ್ಯಂತ ಆಘಾತದ ಅಲೆಗಳನ್ನು ಸೃಷ್ಟಿಸಿದೆ. ಅಮೆರಿಕ, ರಷ್ಯಾ ಮತ್ತಿತರ ಪ್ರಬಲ ಶಕ್ತಿಗಳು ಅವರ ಹತ್ಯೆಯನ್ನು ತೀವ್ರವಾಗಿ ಖಂಡಿಸಿವೆ.
|