ಸೌಂದರ್ಯ ಮತ್ತು ಚಾಣಾಕ್ಷತನದ ಪ್ರತೀಕ ಬೇನಜೀರ್ ಭುಟ್ಟೋ. ಆಕ್ಸ್‌ಫರ್ಡ್ ಮತ್ತು ಹಾರ್ವರ್ಡ್ ಶಿಕ್ಷಿತ ಪಾಕಿಸ್ತಾನದ ಈ ಮಾಜಿ ಪ್ರಧಾನಿ ಒಂದು ಕಾಲದಲ್ಲಿ ಪೀಪಲ್ ಮ್ಯಾಗಜಿನ್‌ನ "50 ಅತಿ ಸುಂದರ ವ್ಯಕ್ತಿ"ಗಳ ಪಟ್ಟಿಯಲ್ಲಿದ್ದವರು.
ಅವರ ಗ್ಲಾಮರಸ್ ಲುಕ್ ಮತ್ತು ಅವರ ಟ್ರೇಡ್‌ಮಾರ್ಕ್‌ನಂತಿರುವ ಬಿಳಿ ಸ್ಕಾರ್ಫ್ ಸಹಿತದ ಉಡುಗೆಯ ಆಯ್ಕೆಯು ಅವರನ್ನು ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ "ಮಾಧ್ಯಮದ ಡಾರ್ಲಿಂಗ್" ಆಗಿಸಿದ್ದವು
1988ರಲ್ಲಿ 35 ವರ್ಷದವರಾಗಿದ್ದ ಭುಟ್ಟೋ ಪೀಪಲ್ಸ್ ಮ್ಯಾಗಜಿನ್‌ನಲ್ಲಿ ಕಾಣಿಸಿಕೊಂಡಿದ್ದರು. ಅಂದು ಅವರು ಅತ್ಯಂತ ಎಳೆ ಪ್ರಾಯದ ಮತ್ತು ಆಧುನಿಕ ಕಾಲದಲ್ಲಿ ಮುಸ್ಲಿಂ ಪ್ರಾಬಲ್ಯತೆಯ ರಾಷ್ಟ್ರವೊಂದರ ಸರಕಾರದ ಮುಖ್ಯಸ್ಥರಾದ ಮೊದಲ ಮಹಿಳೆ ಎಂಬ ಅಭಿದಾನಕ್ಕೆ ಪಾತ್ರರಾಗಿದ್ದರು.
ಭುಟ್ಟೋ ಅವರ ವಜ್ರಖಚಿತವಾಗಿರುವ ಡಿಸೈನರ್ ಫ್ಯಾಶನ್ ಕನ್ನಡಕ ಕೂಡ ಎಲ್ಲರ ಆಕರ್ಷಣೆಯ ಕೇಂದ್ರ ಬಿಂದುವಾಗಿತ್ತು. ಮಾಜಿ ರೈಲ್ವೇ ಸಚಿವ ಶೇಖ್ ರಶೀದ್ ಅಹ್ಮದ್ ಅವರಂತೂ ಈ ಕನ್ನಡಕವನ್ನೇ ಪತ್ರಿಕಾಗೋಷ್ಠಿಯೊಂದರಲ್ಲಿ ಟೀಕಿಸಿದ್ದರು.
ಹಿರಿಯ ಪತ್ರಕರ್ತರೊಬ್ಬರು ಈ ಕನ್ನಡಕದ ಬಗ್ಗೆ ಒಮ್ಮೆ ಬರೆದಿದ್ದರು: "ಡಿಸೈನರ್ ಕನ್ನಡಕ ಮತ್ತು ಹೊಳಪಾದ ಲಿಪ್‌ಸ್ಟಿಕ್‌ನೊಂದಿಗೆ ಆಕೆ ಗ್ರೀಕ್ ಗಾಯಕಿ ನಾನಾ ಮೌಸ್ಕೋರಿಯ ಮತ್ತೊಂದು ಅವತಾರದಂತೆ ಕಾಣಿಸುತ್ತಾರೆ".
|