ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಬೇನಜೀರ್ ಭುಟ್ಟೊ ನಡೆದು ಬಂದ ದಾರಿ
PTI
ಪಾಕಿಸ್ತಾನದ ಮಾಜಿ ಪ್ರಧಾನಮಂತ್ರಿ ಬೇನಜೀರ್ ಭುಟ್ಟೊ ಗುಂಡಿನ ದಾಳಿಗೆ ಬಲಿಯಾಗುವ ಮೂಲಕ ಪಾಕಿಸ್ತಾನ ಇತಿಹಾಸದ ಕರಾಳ ಪುಟಗಳಲ್ಲಿ ಸೇರಿಹೇದರು. 54 ವರ್ಷ ವಯಸ್ಸಿನ ಭುಟ್ಟೊ ಪಾಕಿಸ್ತಾನದಲ್ಲಿ 1988-90 ಮತ್ತು 1993-96ರ ನಡುವೆ ಎರಡು ಬಾರಿ ಪ್ರಧಾನಮಂತ್ರಿಯಾಗಿದ್ದರು.

ಪರ್ವೇಜ್ ಮುಷರ್ರಫ್ ರಕ್ತರಹಿತ ಕ್ರಾಂತಿಯ ಮೂಲಕ ನವಾಜ್ ಶರೀಫ್ ಅವರಿಂದ ಅಧಿಕಾರವನ್ನು ಕಸಿದುಕೊಂಡ ಬಳಿಕ ಭುಟ್ಟೊ ಸ್ವಯಂಪ್ರೇರಣೆಯಿಂದ ದೇಶ ಬಿಟ್ಟು ತೆರಳಿದರು. ಆದರೆ ಪಾಕಿಸ್ತಾನದಲ್ಲಿ ಕ್ಷಿಪ್ರಗತಿಯ ರಾಜಕೀಯ ಬೆಳವಣಿಗೆಗಳು ಸಂಭವಿಸಿದ ನಂತರ ಕಳೆದ ಅ.17ರಂದು ಸ್ವದೇಶಕ್ಕೆ ಹಿಂತಿರುಗಿದ ಭುಟ್ಟೊಗೆ ಅಂದೇ ರಾತ್ರಿ ಮೃತ್ಯುಸ್ವರೂಪದಲ್ಲಿ ಆತ್ಮಾಹುತಿ ಬಾಂಬ್ ದಾಳಿ ಕಾದುಕೊಂಡಿತ್ತು,

ಆದರೆ ಭುಟ್ಟೊ ಅದೃಷ್ಟವಶಾತ್ ಈ ದಾಳಿಯಿಂದ ಜೀವಸಹಿತ ಪಾರಾದರು. ಆತ್ಮಹತ್ಯೆ ಬಾಂಬರ್ ಸ್ಫೋಟದಲ್ಲಿ 139 ಬೆಂಬಲಿಗರು ಮತ್ತು ರಕ್ಷಣಾ ಪಡೆ ಸಿಬ್ಬಂದಿ ಪ್ರಾಣ ತೆತ್ತರು. ಆದರೆ ಭುಟ್ಟೊ ಸಾವಿಗೆ ವಿಧಿಲಿಖಿತ ಇದ್ದಿರಬಹುದೆನ್ನುವಂತೆ ಅವರನ್ನು ಬೆಂಬಿಡದ ಮೃತ್ಯು ಬಂಧೂಕುದಾರಿಯ ರೂಪದಲ್ಲಿ ಕೊನೆಗೂ ಬಲಿತೆಗೆದುಕೊಂಡಿತು.

ಭುಟ್ಟೊ ಸಾವಿನ ಬಳಿಕ ನವಾಜ್ ಶರೀಫ್ ತೀವ್ರ ಸಂತಾಪ ವ್ಯಕ್ತಪಡಿಸಿ ಪಾಕಿಸ್ತಾನದ ರಾಜಕೀಯಕ್ಕೆ ಭುಟ್ಟೊ ನಿಧನ ದೊಡ್ಡ ಪೆಟ್ಟು ಎಂದು ಹೇಳಿದ್ದಾರೆ. ಪಿಪಿಪಿ ಕಾರ್ಯಕರ್ತರು ಎದೆಬಡಿದುಕೊಳ್ಳುತ್ತಾ ಘೋಷಣೆ ಕೂಗುತ್ತಿದ್ದ ಪರಿ ಹೃದಯವಿದ್ರಾವಕವಾಗಿತ್ತು. ಭುಟ್ಟೊ ಅವರ ಹೋರಾಟವನ್ನು ತಾವು ಸತತವಾಗಿ ಮುಂದುವರಿಸುವುದಾಗಿ ಅವರು ಪಿಪಿಪಿ ಕಾರ್ಯಕರ್ತರಿಗೆ ಭರವಸೆ ನೀಡಿದರು.

ಭುಟ್ಟೊ ಜನನ:

1953ರ ಜೂನ್ 21ರಂದು ಕರಾಚಿಯಲ್ಲಿ ಜನಿಸಿದ ಭುಟ್ಟೊ ಮುಸ್ಲಿಂ ಜಗತ್ತಿನಲ್ಲಿ ಪ್ರಪ್ರಥಮ ಪ್ರಧಾನಮಂತ್ರಿಯಾಗಿದ್ದಾರೆ. ಪಾಕಿಸ್ತಾನದಲ್ಲಿ ತಮ್ಮ ಶಿಕ್ಷಣ ಮುಗಿಸಿದ ಭುಟ್ಟೊ ಉನ್ನತಶಿಕ್ಷಣಕ್ಕಾಗಿ ಅಮೆರಿಕಕ್ಕೆ ತೆರಳಿದರು. 1969ರಿಂದ 1973ರವರೆಗೆ ರಾಡ್‌ಕ್ಲಿಫ್ ಕಾಲೇಜು ಮತ್ತು ಹಾರ್ವರ್ಡ್ ವಿವಿಯಲ್ಲಿ ಅವರು ಶಿಕ್ಷಣ ಪಡೆದರು.

ತತ್ವಶಾಸ್ತ್ರ, ರಾಜಕೀಯ ಮತ್ತು ಅರ್ಥಶಾಸ್ತ್ರವನ್ನು ಆಕ್ಸ್‌ಫರ್ಡ್‌ನಲ್ಲಿ ಅವರು ಅಧ್ಯಯನ ಮಾಡಿದರು. 1998ರಿಂದ ಸ್ವಯಂ ದೇಶಭ್ರಷ್ಟರಾಗಿದ್ದ ಭುಟ್ಟೊ ಅವರು ಅ.18ರಂದು ಸ್ವದೇಶಕ್ಕೆ ಹಿಂತಿರುಗಿದ್ದರು. ಆದರೆ ಅವರ ಸ್ವದೇಶಾಗಮನವು ದುರಂತದಲ್ಲಿ ಮುಕ್ತಾಯವಾಗಿ, ಪಾಕಿಸ್ತಾನ ಇತಿಹಾಸದ ರಕ್ತಸಿಕ್ತ ಪುಟಗಳಲ್ಲಿ ಸೇರಿಹೋಯಿತು.

ಕುಟಂಬದ ದುರಂತ ಅಧ್ಯಾಯ

ಭುಟ್ಟೊ ಕುಟುಂಬ ದುರಂತ ಅಧ್ಯಾಯಕ್ಕೆ ಸಾಕ್ಷಿಯಾಗಿ ನಿಂತಿದೆ. ಅವರ ಎರಡು ಪೀಳಿಗೆಯ ಸದಸ್ಯರು ಹಿಂಸಾತ್ಮಕ ಸಾವಿನಲ್ಲಿ ಕೊನೆಗೊಂಡ ಬಳಿಕ ಬೇನಜೀರ್ ಭುಟ್ಟೊ ಸಹ ದುರಂತದ ಸಾವಪ್ಪಿದರು. ಬೇನಜೀರ್ ಅವರ ತಂದೆ ಮತ್ತು ಮಾಜಿ ಪ್ರಧಾನಮಂತ್ರಿ ಝುಲ್ಫಿಕರ್ ಅಲಿ ಭುಟ್ಟೊ ಅವರನ್ನು 1979ರ ಏ.4ರಂದು ಗಲ್ಲಿಗೇರಿಸಿದಾಗ ದುರಂತದ ಅಧ್ಯಾಯಕ್ಕೆ ಮುನ್ನುಡಿ ಬರೆಯಲಾಗಿತ್ತು.

ಕೇವಲ ಒಂದು ವರ್ಷದಲ್ಲೇ ಭುಟ್ಟೊ ಸೋದರ ಶಹನಾವಾಜ್ ಅನುಮಾನಾಸ್ಪದ ರೀತಿಯಲ್ಲಿ ಫ್ರಾನ್ಸ್‌ನಲ್ಲಿ ಮೃತಪಡುವ ಮೂಲಕ ಕುಟುಂಬವನ್ನು ಕಾಡಿದ ದುರಂತರ ನೆರಳು ದಟ್ಟವಾಗಿ ಆವರಿಸಿತು. ಬೇನಜೀರ್ ಇನ್ನೊಬ್ಬ ಸೋದರ ಮಿರ್ ಮುರ್ತಾಜಾ ಕೂಡ 1996ರಲ್ಲಿ ಹತ್ಯೆಗೊಳಗಾದರು. ಬೇನಜೀರ್ ಭುಟ್ಟೊ ಅವರ ಹತ್ಯೆಯೊಂದಿಗೆ ಇಡೀ ಕುಟುಂಬವೇ ದುರಂತದ ಸಾವಿನಲ್ಲಿ ಅಂತ್ಯಕಂಡಿತು.
ಮತ್ತಷ್ಟು
ಸೌಂದರ್ಯ, ಡಿಸೈನರ್ ಕನ್ನಡಕಕ್ಕೆ ಹೆಸರಾಗಿದ್ದ ಭುಟ್ಟೋ
ಉಗ್ರರ ಬೆದರಿಕೆ: ಪಾಕ್‌ನಲ್ಲಿ ತೀವ್ರ ಕಟ್ಟೆಚ್ಚರ
ಮುಷ್-ಕರ್ಜಾಯಿ ಮಹತ್ವದ ಮಾತುಕತೆ
2008ರ ಬಜೆಟ್ ನಿಧಿಗೆ ಬುಷ್ ಅಂಕಿತ
ನವಾಜ್ ಷರೀಫ್ ಸಭೆಯಲ್ಲಿ ಗುಂಡಿನ ದಾಳಿ; ನಾಲ್ಕು ಸಾವು
ಆತ್ಮಾಹುತಿ ದಾಳಿ: ಬೇನಜೀರ್ ಭುಟ್ಟೋ ಹತ್ಯೆ