"ಬೇನಜೀರ್ ಅತ್ಯಂತ ಅಮೂಲ್ಯವಾದ ಅಮೆರಿಕದ ಆಸ್ತಿ" ಎಂದು ಬಣ್ಣಿಸಿರುವ ಇಸ್ಲಾಮಿಕ್ ಉಗ್ರಗಾಮಿ ಸಂಘಟನೆ ಅಲ್ ಖಾಯಿದಾ, ಪಾಕಿಸ್ತಾನದ ಮಾಜಿ ಪ್ರಧಾನಿ ಹತ್ಯೆಯ ಹೊಣೆ ಹೊತ್ತುಕೊಂಡಿದೆ.
ಮುಜಾಹಿದೀನ್‌ಗಳ್ನು ಹಿಮ್ಮೆಟ್ಟಿಸುವ ಪಣ ತೊಟ್ಟಿದ್ದ ಅತ್ಯಂತ ಅಮೂಲ್ಯ ಅಮೆರಿಕನ್ ಆಸ್ತಿಯನ್ನು ನಾವು ನಿವಾರಿಸಿದ್ದೇವೆ ಎಂದು ಅಫ್ಘಾನಿಸ್ತಾನ ಮೂಲದ ಅಲ್ ಖಾಯಿದಾ ಕಮಾಂಡರ್ ಮತ್ತು ವಕ್ತಾರ ಮುಸ್ತಫಾ ಅಬು ಅಲ್ ಯಾಜಿದ್ ಎಂಬಾತ ಇಟಾಲಿಯನ್ ಸುದ್ದಿ ಸಂಸ್ಥೆಗೆ ಟೆಲಿಫೋನ್ ಮೂಲಕ ತಿಳಿಸಿದ್ದಾನೆ.
ಈತ ಅಲ್ ಖಾಯಿದಾದ ಪ್ರಧಾನ ಕಮಾಂಡರ್ ಎಂದು ತಿಳಿಸಿರುವ ಸುದ್ದಿ ಸಂಸ್ಥೆ ಎಕೆಐ, ಭುಟ್ಟೋ ಅವರ ಹತ್ಯೆಗೆ ಅಕ್ಟೋಬರ್ ತಿಂಗಳಲ್ಲೇ ಅಲ್ ಖಾಯಿದಾದ ನಂ.2 ನಾಯಕ ಅಯ್ಮಾನ್ ಅಲ್ ಜವಾಹಿರಿ ನಿರ್ಧಾರ ಕೈಗೊಂಡಿದ್ದ ಎಂದು ತಿಳಿಸಿದೆ.
ಈ ಕಾರ್ಯಾಚರಣೆಗೆ ಹಂತಕ ದಳಗಳನ್ನು ರಚಿಸಲಾಗಿತ್ತು. ಈ ಘಟಕದ ಲಷ್ಕರ್ ಇ ಜಂಗ್ವಿ ಉಗ್ರಪಡೆಯ "ಪಂಜಾಬಿ ಸ್ವಯಂಸೇವಕ"ನೊಬ್ಬ ಭುಟ್ಟೋ ಅವರ ಹತ್ಯೆಗೈದ ಎಂದು ವರದಿ ತಿಳಿಸಿದೆ.
ಗುರುವಾರ ಚುನಾವಣಾ ಸಭೆಯಲ್ಲಿ ಮಾತನಾಡಿದ ಕೆಲವೇ ಕ್ಷಣಗಳಲ್ಲಿ ಭುಟ್ಟೋ ಅವರ ಮೇಲೆ ದಾಳಿ ಮಾಡಿದ ಆತ್ಮಹತ್ಯಾ ಬಾಂಬರ್ ಒಬ್ಬ, ಬಳಿಕ ತನ್ನನ್ನು ತಾನೇ ಸ್ಫೋಟಿಸಿಕೊಂಡ. ಈ ಘಟನೆಯಲ್ಲಿ 30ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದರು.
ಈ ಸಮಾವೇಶದಲ್ಲಿ ಭುಟ್ಟೋ ಅವರು ಪದೇ ಪದೇ ಭಯೋತ್ಪಾದಕ ಶಕ್ತಿಗಳ ವಿರುದ್ಧ ಗುಡುಗಿದ್ದರು ಮತ್ತು ಉಗ್ರಗಾಮಿಗಳನ್ನು ಮಟ್ಟ ಹಾಕುವ ಪಣ ತೊಟ್ಟಿದ್ದರು.
|