ಪಾಕಿಸ್ತಾನದ ಮಾಜಿ ಪ್ರಧಾನಿ ಮತ್ತು ಪಾಕಿಸ್ತಾನ ಪೀಪಲ್ಸ್ ಪಾರ್ಟಿ (ಪಿಪಿಪಿ)ಯ ಪರಮೋಚ್ಛ ನಾಯಕಿ ಬೆನಜೀರ್ ಭುಟ್ಟೊ ಹತ್ಯೆಯ ಹಿನ್ನಲೆಯಲ್ಲಿ, ಪಕ್ಷವನ್ನು ಸಮರ್ಥವಾಗಿ ಮುನ್ನಡೆಸಲು ಭುಟ್ಟೊ ಅವರ ಪುತ್ರ 19 ವರ್ಷದ ಬಿಲಾವಲ್ ಪಿಪಿಪಿ ಪಕ್ಷದ ಪರಮೋಚ್ಛ ನಾಯಕರಾಗಿ ಆಯ್ಕೆಯಾಗಿದ್ದಾರೆ.
19ರ ಹರೆಯದ ಬಿಲಾವಲ್ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಕಾರಣ, ಸದ್ಯಕ್ಕೆ ಪಕ್ಷದ ಜವಾಬ್ದಾರಿಯನ್ನು ತನ್ನ ತಂದೆ ಆಸಿಫ್ ಅಲಿ ಝರ್ಧಾರಿ ಅವರಿಗೆ ವಹಿಸಿ, ಮುಂಬರುವ ದಿನಗಳಲ್ಲಿ ಸಕ್ರಿಯ ಜವಾಬ್ದಾರಿಯ ತೆಗೆದುಕೊಳ್ಳುವುದಾಗಿ ಹೇಳಿದ್ದಾನೆ.
"ಪಾಕಿಸ್ತಾನದಲ್ಲಿ ಪ್ರಜಾಪ್ರಭುತ್ವವನ್ನು ಮರುಸ್ಥಾಪಿಸುವ ನಿಟ್ಟಿನಲ್ಲಿ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ತನ್ನ ತಾಯಿಯ ಹತ್ಯೆಯಿಂದಾಗಿ ಈ ಚುನಾವಣೆ ನಿಲ್ಲುವುದು ಬೇಡ. ನಾವು ಧೈರ್ಯದಿಂದ ಜನವರಿ 8ರ ಚುನಾವಣೆಯನ್ನು ಎದುರಿಸುತ್ತೇವೆ'" ಎಂದು ನಂತರ ನಡೆದ ಸುದ್ದಿಗೋಷ್ಠಿಯಲ್ಲಿ ಬಿಲಾವಲ್ ಭಾವುಕರಾಗಿ ನುಡಿದರು.
ಈ ಮಧ್ಯೆ ಆಡಳಿತಾರೂಢ ಪಿಎಂಎಲ್-ಕ್ಯೂ ಪಕ್ಷ ಹೇಳಿಕೆಯೊಂದನ್ನು ನೀಡಿದ್ದು, ಮಾಜಿ ಪ್ರಧಾನಿ ಭುಟ್ಟೊ ಹತ್ಯೆಯ ಹಿನ್ನಲೆಯಲ್ಲಿ, ಪಾಕ್‌ನಲ್ಲೀಗ ಅರಾಜಕತೆ ಉಂಟಾಗಿದ್ದು, ಸಾರ್ವತ್ರಿಕ ಚುನಾವಣೆಗಳು ಎಪ್ರಿಲ್ ಅಥವಾ ಮೇ ನಲ್ಲಿ ನಡೆಸುವುದು ಸೂಕ್ತ ಎಂಬ ರಾಗ ಎಳೆಯುತ್ತಿದೆ.
ಪಿಪಿಪಿ ಪರಮೋಚ್ಛ ನಾಯಕರಾಗಿ ಆಯ್ಕೆಯಾಗಿರುವ ಬಿಲಾವಲ್ ಅವರ ಅನುಪಸ್ಥಿತಿಯಲ್ಲಿ, ಅವರ ತಂದೆ ಮತ್ತು ಪಕ್ಷದ ಇನ್ನಿತರ ಮುಖಂಡರುಗಳ ನೇತೃತ್ವದಲ್ಲಿ ಚುನಾವಣೆಯನ್ನು ಎದುರಿಸಲು ಪಿಪಿಪಿ ಪಕ್ಷ ಸರ್ವ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
|