ಭಯೋತ್ಪಾದಕರ ವಿರುದ್ಧ ಒತ್ತಡವನ್ನು ಹೆಚ್ಚಿಸಿ ಸ್ವಾತಂತ್ರ್ಯದ ಶತ್ರುಗಳ ವಿರುದ್ಧ ಆಕ್ರಮಣಕಾರಿ ನಿಲುವನ್ನು ಅನುಸರಿಸುವುದಾಗಿ ಅಮೆರಿಕದ ಅಧ್ಯಕ್ಷ ಜಾರ್ಜ್ ಡಬ್ಲ್ಯು ಬುಷ್ ಹೊಸ ವರ್ಷದ ಸಂದೇಶದಲ್ಲಿ ಅಮೆರಿಕ ಮತ್ತು ಜಗತ್ತಿನ ಜನರಿಗೆ ತಿಳಿಸಿದ್ದಾರೆ. "ಭಯೋತ್ಪಾದಕರು ಮತ್ತು ತೀವ್ರವಾದಿಗಳನ್ನು ಸೋಲಿಸಲು ಅಮೆರಿಕ ದೃಢಸಂಕಲ್ಪ ಮಾಡಿದೆ.
2008ರಲ್ಲಿ ನಾವು ಅಂತಾರಾಷ್ಟ್ರೀಯ ಸಮುದಾಯದಲ್ಲಿ ನಮ್ಮ ಸಹಭಾಗಿಗಳ ಜತೆ ನಿಂತು ನಮ್ಮ ಮಕ್ಕಳಿಗೆ ಮತ್ತು ಮೊಮ್ಮಕ್ಕಳಿಗೆ ಶಾಂತಿಯ ಅಡಿಪಾಯವನ್ನು ಹಾಕುತ್ತೇವೆ" ಎಂದು ಬುಷ್ ಟೆಕ್ಸಾಸ್‌ನಲ್ಲಿರುವ ತಮ್ಮ ರಾಂಚ್‌ನಿಂದ ಹೊಸ ವರ್ಷದ ಸಂದೇಶದಲ್ಲಿ ತಿಳಿಸಿದ್ದಾರೆ. ರಾಂಚ್‌ನಲ್ಲಿ ತಮ್ಮ ಕುಟುಂಬ ಮತ್ತು ಸ್ನೇಹಿತರ ಜತೆ ಕ್ರಿಸ್‌ಮಸ್ ಉತ್ಸವದಲ್ಲಿ ಪಾಲ್ಗೊಂಡ ಬಳಿಕ ಇಂದು ಮಧ್ಯಾಹ್ನ ಶ್ವೇತಭವನಕ್ಕೆ ಬುಷ್ ಹಿಂತಿರುಗುವರು.
"ದೃಢ ಆರ್ಥಿಕತೆಯಿಂದ ಅವಕಾಶ ಮತ್ತು ಆಶಯದ ಭವಿಷ್ಯ ಆರಂಭಗೊಳ್ಳುತ್ತದೆ. ನಮ್ಮ ಆರ್ಥಿಕತೆ ಕಳೆದ ವರ್ಷ ಚೇತೋಹಾರಿ ಬೆಳವಣಿಗೆ ಕಂಡಿತು. ತೆರಿಗೆಯನ್ನು ತಗ್ಗಿಸುವ ಮೂಲಕ ಮತ್ತು ಹಣಕಾಸು ನಿರ್ಬಂಧಗಳ ಮೂಲಕ ಉದ್ಯೋಗಾವಕಾಶಗಳು ಹೆಚ್ಚಿದವು" ಎಂದು ಬುಷ್ ಹೇಳಿದರು.
ಸ್ವದೇಶದಲ್ಲಿ ನಮ್ಮ ಪ್ರಯತ್ನದ ಜತೆಗೆ ವಿಶ್ವಾದ್ಯಂತ ಶಾಂತಿ ಮತ್ತು ಸ್ವಾತಂತ್ರ್ಯ ವಿಸ್ತರಣೆ ಕಾರ್ಯವನ್ನು ಅಮೆರಿಕ ಮುಂದುವರಿಸಿದೆ ಎಂದು ಬುಷ್ ಹೇಳಿದರು.
|