ಹತ್ಯೆಯಾದ ಮಾಜಿ ಪ್ರಧಾನಮಂತ್ರಿ ಬೇನಜೀರ್ ಭುಟ್ಟೊ ಅವರ ಕೊನೆಯ ಘಳಿಗೆಗಳಲ್ಲಿ ಅವರನ್ನು ನೋಡಿಕೊಳ್ಳುತ್ತಿದ್ದ ವೈದ್ಯರಿಗೆ ಮೌನವಾಗಿರುವಂತೆ ಪಾಕಿಸ್ತಾನದ ಅಧಿಕಾರಿಗಳು ಬಲವಂತ ಮಾಡಿದ್ದಲ್ಲದೇ ಭುಟ್ಟೊ ಅವರ ಚಿಕಿತ್ಸೆಯ ದಾಖಲೆಗಳನ್ನು ಅಳಿಸಿಹಾಕಿದ್ದರು ಎಂದು ವಾಷಿಂಗ್‌ಟನ್ ಪೋಸ್ಟ್ ತಿಳಿಸಿದೆ.
ಬೇನಜೀರ್ ಸಾವು ಸಂಭವಿಸಿದ ಕ್ಷಣದಲ್ಲೇ ಮುಷರ್ರಫ್ ಆಡಳಿತ ಎಲ್ಲ ವೈದ್ಯಕೀಯ ದಾಖಲೆಗಳನ್ನು ತೆಗೆದುಕೊಂಡು ಹೋಯಿತು.ಸರ್ಕಾರವು ಬಾಯಿಮುಚ್ಚಿಕೊಂಡಿರುವಂತೆ ತಮಗೆ ಸೂಚಿಸುವ ಮೂಲಕ ತಮಗೆ ಅಗೌರವ ತೋರಿಸಲಾಯಿತೆಂದು ವೈದ್ಯರು ಹೇಳಿದ್ದಾರೆ. ಈ ಘಟನೆಯ ಬಳಿಕ ರಾವಲ್ಪಿಂಡಿ ಆಸ್ಪತ್ರೆಯ ವೈದ್ಯರು ಮೌನಕ್ಕೆ ಶರಣಾದರು.
ಬೇನಜೀರ್ ಅವರ ಪಾಕಿಸ್ತಾನ ಪೀಪಲ್ಸ್ ಪಕ್ಷದ ಉನ್ನತ ಪದಾಧಿಕಾರಿ ಬಾಬರ್ ಅವಾನ್ ತಾನು ಎರಡು ಸ್ಪಷ್ಟ ಗುಂಡಿನ ಗಾಯಗಳ ಪ್ರವೇಶ ಮತ್ತು ನಿರ್ಗಮನ ಸ್ಥಳಗಳನ್ನು ಗುರುತಿಸಿರುವುದಾಗಿ ಹೇಳಿದ್ದಾರೆ. ಆಸ್ಪತ್ರೆಯ ಶಸ್ತ್ರಚಿಕಿತ್ಸೆಯ ಮುಖ್ಯ ಪ್ರೊಫೆಸರ್ ಮೊಹಮದ್ ಮುಸಾದಿಖ್ ಖಾನ್ ತೀವ್ರ ಉದ್ವೇಗಕ್ಕೀಡಾಗಿದ್ದು, ಬೇನಜೀರ್ ಗುಂಡಿನ ಗಾಯದಿಂದ ಸತ್ತರೆಂದು ತಮಗೆ ತಿಳಿಸಿದ್ದಾಗಿ ಬಾಬರ್ ಅವಾನ್ ಹೇಳಿದರು.
ಏತನ್ಮಧ್ಯೆ, ಬೇನಜೀರ್ ಗುಂಡಿನ ದಾಳಿ ಅಥವಾ ಭಯೋತ್ಪಾದನೆ ದಾಳಿಯಲ್ಲಿ ಸತ್ತಿಲ್ಲವೆಂದು ನೀಡಿದ ಹೇಳಿಕೆಗೆ ಪಾಕಿಸ್ತಾನ ಸರ್ಕಾರ ಕ್ಷಮಾಪಣೆ ಕೋರಿದೆ.
|