ಮಾಜಿ ಪ್ರಧಾನಿ ಬೇನಜೀರ್ ಭುಟ್ಟೋ ಹತ್ಯೆ ಕುರಿತಾದ ತನ್ನ ತನಿಖೆಯು ಪ್ರಗತಿಯಲ್ಲಿದೆ ಎಂದು ಹೇಳಿಕೊಂಡಿರುವ ಪಾಕಿಸ್ತಾನ ಸರಕಾರ, ಭುಟ್ಟೋ ಹಂತಕರ ಕುರಿತು ಮಾಹಿತಿ ನೀಡಿದವರಿಗೆ ಒಂದು ಕೋಟಿ ರೂ. ಬಹುಮಾನ ನೀಡುವುದಾಗಿ ಪ್ರಮುಖ ಪತ್ರಿಕೆಗಳ ಮುಖಪುಟದಲ್ಲಿ ಜಾಹೀರಾತು ಪ್ರಕಟಿಸಿದೆ.
"ಏನನ್ನೂ ಮುಚ್ಚಿಡಲಾಗುವುದಿಲ್ಲ. ಎಲ್ಲಾ ಸತ್ಯಾಂಶಗಳನ್ನು ಬಹಿರಂಗಪಡಿಸಲಾಗುತ್ತದೆ" ಎಂದು ಆಂತರಿಕ ಸಚಿವಾಲಯ ವಕ್ತಾರ ಜಾವೇದ್ ಇಕ್ಬಾಲ್ ಚೀಮಾ ಅವರು ತಿಳಿಸಿದ್ದು, ತನಿಖೆ ಪ್ರಗತಿಯಲ್ಲಿದ್ದು, ಹಿರಿಯ ಅಧಿಕಾರಿಗಳು ಎಲ್ಲಾ ರೀತಿಯ ವೈಜ್ಞಾನಿಕ ಸಾಕ್ಷ್ಯಗಳನ್ನು ಕಲೆ ಹಾಕುತ್ತಿದ್ದಾರೆ ಎಂದು ಹೇಳಿದ್ದಾರೆ.
ದಾಳಿಯ ವೇಳೆ ಭುಟ್ಟೋ ಅವರ ತಲೆಬುರುಡೆಗಾದ ಗಾಯದಿಂದಾಗಿ ಸತ್ತಿದ್ದರೆಂಬ ಸರಕಾರದ ಹೇಳಿಕೆಯನ್ನು ಆಕೆಯ ಪಾಕಿಸ್ತಾನ ಪೀಪಲ್ಸ್ ಪಕ್ಷವು "ಸ್ಪಷ್ಟವಾದ ಮೂರ್ಖತನದ ಹೇಳಿಕೆ" ಎಂದು ತಳ್ಳಿ ಹಾಕಿತ್ತು. ಆಕೆಯ ತಲೆಗೆ ಗುಂಡಿಟ್ಟು ಕೊಲ್ಲಲಾಗಿದೆ ಎಂದು ಪಿಪಿಪಿ ವಾದಿಸಿತ್ತು.
ಕಾರಿನ ಬಿಸಿಲ್ಚಾವಣಿ ತಗುಲಿ ಭುಟ್ಟೋ ಮೃತಪಟ್ಟರೆಂಬ ಸರಕಾರದ ಈ ಹಿಂದಿನ ಹೇಳಿಕೆ ಬಗ್ಗೆ ಕೇಳಿದಾಗ ಚೀಮಾ, ಅದು ಆ ಸಮಯದಲ್ಲಿ ಆರಂಭಿಕ ಮಾಹಿತಿಯ ಆಧಾರದಲ್ಲಿ ನೀಡಿದ ಹೇಳಿಕೆಯಾಗಿತ್ತು ಎಂದು ಸಮರ್ಥಿಸಿಕೊಂಡರು.
ಪತ್ರಿಕೆಗಳು ಮತ್ತು ಟಿವಿ ಚಾನೆಲ್‌ಗಳಲ್ಲಿ ಭುಟ್ಟೋ ಹತ್ಯೆಯ ತುಣುಕುಗಳನ್ನು ತೋರಿಸಲಾಗುತ್ತಿದ್ದು, ಬಿಳಿ ಅಂಗಿ ತೊಟ್ಟಿದ್ದ, ಕಪ್ಪು ದಿರಿಸು ಮತ್ತು ಕಪ್ಪು ಕನ್ನಡಕ ಧರಿಸಿದ್ದ ಯುವ ಶೂಟರ್ ಹಾಗೂ ಮುಖವನ್ನು ಬಿಳಿ ಬಟ್ಟೆಯಿಂದ ಮುಚ್ಚಿಕೊಂಡಿದ್ದ ಶಂಕಿತ ಆತ್ಮಹತ್ಯಾ ದಾಳಿಕೋರರ ಚಿತ್ರಗಳು ಗಮನ ಸೆಳೆದಿವೆ. ಜಾಹೀರಾತಿನಲ್ಲೂ ಇವುಗಳನ್ನು ತೋರಿಸಲಾಗಿದ್ದು, ಶಂಕಿತ ಬಾಂಬರ್‌ನ ಛಿದ್ರಗೊಂಡ ತಲೆಯನ್ನೂ ಛಾಪಿಸಲಾಗಿದೆ.
|