ಪಾಕಿಸ್ತಾನದ ಮಾಜಿ ಪ್ರಧಾನಿ ಬೆನಜೀರ್ ಭುಟ್ಟೊ ಹತ್ಯೆಯ ಹಿಂದೆ ಸೇನಾ ಮತ್ತು ಐಎಸ್‌ಐ ಕೈವಾಡವಿಲ್ಲ ಎಂದು ಸ್ಪಷ್ಟಪಡಿಸಿರುವ ಪಾಕ್ ಅಧ್ಯಕ್ಷ ಪರ್ವೇಜ್ ಮುಷರಫ್, ಹತ್ಯೆಯ ಯತ್ನಗಳ ಬಗ್ಗೆ ಭುಟ್ಟೋಗೆ ಮಾಹಿತಿ ನೀಡಿದ್ದರೂ ಆಕೆ ಅದನ್ನು ನಿರ್ಲಕ್ಷಿಸಿದ್ದರು ಎಂದು ಹೇಳಿದ್ದಾರೆ.
ಉಗ್ರರು ಭುಟ್ಟೊ ಮೇಲೆ ದಾಳಿ ಮಾಡುವ ಬಲವಾದ ಮಾಹಿತಿ ನಮಗೆ ಲಭ್ಯವಾಗಿದ್ದವು. ಈ ಕುರಿತು ನಾನು ಭುಟ್ಟೊ ಅವರಿಗೆ ಹಲವು ಬಾರಿ ಎಚ್ಚರಿಕೆ ನೀಡಿದ್ದೆ. ಆದರೂ, ಅವುಗಳನ್ನು ಗಂಭೀರವಾಗಿ ಪರಿಗಣಿಸದೆ ಭುಟ್ಟೊ ತಮ್ಮ ಸಾವಿಗೆ ತಾವೇ ಕಾರಣರಾದರು ಎಂದು ಸುದ್ದಿಗೋಷ್ಠಿಯಲ್ಲಿ ಅವರು ಹೇಳಿದರು.
ತಮ್ಮ ಪ್ರಾಣಭಯದ ಬಗ್ಗೆ ಸಹ ಪ್ರಸ್ತಾಪಿಸಿದ ಮುಷರಫ್, ಸ್ವತಃ ನಾನು ಕೂಡಾ ಪ್ರಾಣಭಯ ಎದುರಿಸುತ್ತಿದ್ದೇನೆ. ಆದರೆ, ಹೇಗೆ ರಕ್ಷಿಸಿಕೊಳ್ಳಬೇಕೆಂಬ ಅಂಶ ನನಗೆ ಚೆನ್ನಾಗಿ ತಿಳಿಸಿದೆ ಎಂದು ನುಡಿದರು.
ಭುಟ್ಟೊ ಹತ್ಯೆಯ ಹಿಂದೆ ಉಗ್ರರ ಕೈವಾಡವಿರಬಹುದೇ ಹೊರತು, ಸೇನೆಯಾಗಲಿ ಅಥವಾ ಐಎಸ್‌ಐ ಆಗಲಿ ಪಾಲ್ಗೊಂಡಿಲ್ಲ. ಇದು ಕೇವಲ ಅಪಪ್ರಚಾರ ಎಂದವರು ಗುರುವಾರ ರಾತ್ರಿ ಪಾಕಿಸ್ತಾನ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಕಳೆದ ಮೂರು ತಿಂಗಳಲ್ಲಿ ಒಟ್ಟು 19 ಆತ್ಮಹತ್ಯಾ ಬಾಂಬ್ ದಾಳಿಗಳು ನಡೆದಿವೆ. ಅವೆಲ್ಲಾ ಸೇನೆಯ ವಿರುದ್ಧ ಇಲ್ಲವೇ ಐಎಸ್‌ಐ ವಿರುದ್ಧ ನಡೆದಿವೆ ಎಂದವರು ಹೇಳಿದರು.
|