ಉತ್ತರ ಕೊರಿಯಾದ ಪರಮಾಣು ಕಾರ್ಯಕ್ರಮಕ್ಕೆ ಸಂಬಂಧಿಸಿದ ಬಿಕ್ಕಟ್ಟನ್ನು ಬಗೆಹರಿಸುವ ಮತ್ತು ಸಾಂಪ್ರದಾಯಿಕ ಸಿಯೋಲ್-ವಾಷಿಂಗ್ಟನ್ ಮೈತ್ರಿಯನ್ನು ಬಲಗೊಳಿಸುವ ದಿಶೆಯಲ್ಲಿ ದಕ್ಷಿಣ ಕೊರಿಯಾ ಅಮೆರಿಕದ ಜತೆ ಆಪ್ತವಾಗಿ ಕೆಲಸ ಮಾಡಲಿದೆ ಎಂದು ಚುನಾಯಿತ ಅಧ್ಯಕ್ಷ ಲೀ ಮ್ಯಂಗ್-ಬಾಕ್ ಹೇಳಿದ್ದಾರೆ.
ಕೊರಿಯಾ ಮೇಲಿನ ಅಮೆರಿಕ ಪರಿಣತರ ಜತೆಗಿನ ಸಭೆಯಲ್ಲಿ ಲೀ ಈ ಹೇಳಿಕೆ ನೀಡಿದ್ದಾರೆ ಎಂದು ಲೀ ಅವರ ಸಾರ್ವಜನಿಕ ವ್ಯವಹಾರ ಕಚೇರಿಯ ಅಧಿಕಾರಿ ಚೊಯ್ ಸಿಯೊಂಗ್ ತಿಳಿಸಿದ್ದಾರೆ.
90 ನಿಮಿಷಗಳ ಕಾಲ ನಡೆದ ಈ ಸಭೆಯಲ್ಲಿ, ಉತ್ತರ ಕೊರಿಯಾ ಜತೆಗಿನ ಅಂತಾರಾಷ್ಟ್ರೀಯ ಶಸ್ತ್ರಾಸ್ತ್ರ ಮಾತುಕತೆ ಭವಿಷ್ಯದ ಕುರಿತು ಲೀ ಪರಿಣತರಿಂದ ಸಲಹೆ ಹಾಗೂ ಅಭಿಪ್ರಾಯವನ್ನು ಕೋರಿದರು. ಈ ತಜ್ಞರ ತಂಡದಲ್ಲಿ ಅಮೆರಿಕ ಭದ್ರತಾ ಕಾರ್ಯದರ್ಶಿ ವಿಲ್ಲಿಯಂ ಪೆರ್ರಿ ಮತ್ತು ಪೌಲ್ ವೋಲ್ಪೊವಿಟ್ಜ್ ಸೇರಿದ್ದಾರೆ. ಈ ಸಭೆಯ ಬಗ್ಗೆ ಹೆಚ್ಚಿನ ವಿವರ ನೀಡಲು ಚೊಯ್ ನಿರಾಕರಿಸಿದರು.
ಡಿಸೆಂಬರ್ 31 ರ ಅಂತಿಮ ಗಡುವಿನ ವೇಳೆಗೆ ತನ್ನ ಪರಮಾಣು ಕಾರ್ಯಕ್ರಮದ ಸ್ಥಾನಮಾನವನ್ನು ಘೋಷಿಸುವಲ್ಲಿ ಉ.ಕೊರಿಯಾ ವಿಫಲವಾದ ಹಿನ್ನೆಲೆಯಲ್ಲಿ 6 ದೇಶಗಳ ಮಾತುಕತೆ ನಿಂತುಹೋಗಿತ್ತು.
|