ಪಾಕಿಸ್ತಾನದ ಮಾಜಿ ಪ್ರಧಾನಿ ಬೇನಜೀರ್ ಭುಟ್ಟೊ ಹತ್ಯೆ ಪ್ರಕರಣದ ತನಿಖೆಗೆ ನೆರವು ನೀಡಲು ಬ್ರಿಟನ್‌ನ ಸ್ಕಾಟ್ಲೆಂಡ್ ಯಾರ್ಡ್ ತನಿಖಾ ತಂಡವು ಶುಕ್ರವಾರ ಆಗಮಿಸಿದೆ.
ಪಾಕಿಸ್ತಾನ ಪೊಲೀಸರು ಬೇನಜೀರ್ ಹತ್ಯೆಗೆ ಸಂಬಂಧಿಸಿದ ತನಿಖೆಯನ್ನು ಮುಂದುವರಿಸಲಿದ್ದು, ಸ್ಕಾಟ್ಲೆಂಡ್ ಯಾರ್ಡ್ ನೆರವು ನೀಡುವ ಕೆಲಸ ಮಾಡಲಿದೆ ಎಂದು ಆಂತರಿಕ ಸಚಿವಾಲಯ ಹೇಳಿದೆ.
ಸ್ಕಾಟ್ಲೆಂಡ್ ಗುಪ್ತಚರ ಸಂಸ್ಥೆಯು ಮೆಟ್ರೋಪಾಲಿಟನ್ ಭಯೋತ್ಪಾದನಾ ನಿಗ್ರಹ ಪಡೆಯ ಅಧಿಕಾರಿಗಳೊಂದಿಗೆ ಪ್ರಕರಣ ಕುರಿತು ಶುಕ್ರವಾರ ಮಾತುಕತೆ ನಡೆಸಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಅಲ್ಲದೆ, ಆಂತರಿಕ ಸಚಿವಾಲಯ ಕೂಡ ತನಿಖೆಗೆ ಸಂಬಂಧಪಟ್ಟಂತೆ ಚರ್ಚೆ ನಡೆಸಿರುವುದಾಗಿ ತಿಳಿಸಿದೆ.
ಡಿಸೆಂಬರ್ 27ರಂದು ಉಗ್ರರ ದಾಳಿಗೆ ಬಲಿಯಾಗಿದ್ದ ಮಾಜಿ ಪ್ರಧಾನಿ ಬೇನಜೀರ್ ಹತ್ಯೆ ತನಿಖೆಗೆ ಸಹಾಯ ನೀಡಬೇಕೆಂದು ಸ್ಕಾಟ್ಲೆಂಡ್ ಯಾರ್ಡ್ ಸಂಸ್ಥೆಯನ್ನು ಪಾಕಿಸ್ತಾನ ಆಂತರಿಕ ಸಚಿವಾಲಯ ಕೋರಿತ್ತು.
ಬ್ರಿಟನ್‌ನ ಪೊಲೀಸ್ ತಜ್ಞರ ತಂಡ ಪಾಕ್‌ಗೆ ಈ ಮೊದಲು 1951ರಲ್ಲಿ ಪಾಕಿಸ್ತಾನದ ಪ್ರಥಮ ಪ್ರಧಾನಮಂತ್ರಿ ಲಿಯಾಖತ್ ಅಲಿ ಖಾನ್ ಅವರ ಹತ್ಯೆ ಪ್ರಕರಣದ ತನಿಖೆಯನ್ನೂ ನಡೆಸಿತ್ತು. ಆ ಬಳಿಕ 1996ರಲ್ಲಿ ಕರಾಚಿಯಲ್ಲಿ ಬೇನಜೀರ್ ಭುಟ್ಟೊ ಅವರ ಸಹೋದರ ಮುರ್ತಜಾ ಅವರ ಹತ್ಯೆ ತನಿಖೆ ನಡೆಸಿದ್ದು, ಇದೀಗ ಬೇನಜೀರ್ ಹತ್ಯೆಯ ತನಿಖೆಗಾಗಿ 3ನೇ ಬಾರಿ ಪಾಕ್‌ಗೆ ಆಗಮಿಸಿದೆ.
|