ಪಾಕಿಸ್ತಾನದ ಮಾಜಿ ಪ್ರಧಾನಿ ಬೆನಜೀರ್ ಭುಟ್ಟೋ ಹತ್ಯೆಯ ಹಿನ್ನಲೆಯಲ್ಲಿ ಭುಟ್ಟೋ ಸ್ಪರ್ಧಿಸುತ್ತಿದ್ದ ಸಂಸತ್ ಕ್ಷೇತ್ರ ಚುನಾವಣೆಯನ್ನು ರದ್ದುಗೊಳಿಸಲಾಗಿದೆ.
ಭುಟ್ಟೋ ಹತ್ಯೆಯ ಹಿನ್ನಲೆಯಲ್ಲಿ ಸಿಂದ್‌ನ ರಾಷ್ಟ್ರೀಯ ವಿಧಾನಸಭೆ-207 ಲರ್ಕಾನಾ ಮತ್ತು ಶಿಕಾರಿಪುರ್‌ನ ಚುನಾವಣಾ ಪ್ರಕ್ರಿಯೆಗಳನ್ನು ರದ್ದುಪಡಿಸಲಾಗಿದೆ ಎಂದು ಚುನಾವಣಾ ಆಯೋಗವು ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಚುನಾವಣೆಗೆ ನೂತನ ದಿನಾಂಕವನ್ನು ಇನ್ನೂ ನಿಗದಿಪಡಿಸಿಲ್ಲ.
ಈ ಕ್ಷೇತ್ರಗಳಲ್ಲಿ ಚುನಾವಣೆಯನ್ನು ನಡೆಸಲು ನೂತನ ದಿನಾಂಕವನ್ನು ಚುನಾವಣಾ ಆಯೋಗವು ಘೋಷಿಸಿದ ನಂತರವೇ ಚುನಾವಣಾ ಪ್ರಕ್ರಿಯೆಗಳು ಪ್ರಾರಂಭಗೊಳ್ಳಲಿವೆ ಎಂದು ಹೇಳಿಕೆಗಳು ತಿಳಿಸಿವೆ.
ಡಿಸೆಂಬರ್ 27ರಂದು ರಾವಲ್ಪಿಂಡಿಯಲ್ಲಿ ತನ್ನ ಪಕ್ಷದ ಚುನಾವಣಾ ಪ್ರಚಾರದಲ್ಲಿ ಭಾಗವಹಿಸಿದ ನಂತರ ಭುಟ್ಟೋವನ್ನು ಹತ್ಯೆಗೈಯಲಾಗಿತ್ತು. ನಂತರ ಇದರ ವಿರುದ್ಧ ಉಂಟಾದ ಘರ್ಷಣೆಯ ಕಾರಣಗಳಿಂದಾಗಿ ಜನವರಿ 8ಕ್ಕೆ ನಿಗದಿಯಾಗಿದ್ದ ಸಂಸತ್ ಚುನಾವಣೆಯನ್ನು ಫೆಬ್ರವರಿ 18ಕ್ಕೆ ಮುಂದೂಡಲಾಗಿತ್ತು.
ಉಳಿದ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸುವ ಅಗತ್ಯವಿಲ್ಲ ಎಂದು ಚುನಾವಣಾ ಆಯೋಗ ಅಧ್ಯಕ್ಷ ಕನ್ವಾರ್ ದಿಲ್‌ಶಾದ್ ಹೇಳಿದ್ದು, ನೂತನ ಅಭ್ಯರ್ಥಿಗಳಿಗೆ ನಾಮಪತ್ರ ಸಲ್ಲಿಸಲು ಅವಕಾಶ ನೀಡಲಾಗುವುದು ಎಂದು ತಿಳಿಸಿದ್ದಾರೆ.
ಇದೇ ವೇಳೆ, ವಾಯುವ್ಯ ಗಡಿ ಪ್ರಾಂತ್ಯದಲ್ಲಿನ ಅಭ್ಯರ್ಥಿ ಅಮೀರ್ ಜೆಬ್ ಬಾಂಬ್ ದಾಳಿಯಲ್ಲಿ ಹತನಾದ ಹಿನ್ನೆಲೆಯಲ್ಲಿ ಆ ಪ್ರದೇಶದ ವಿಧಾನಸಭೆ ಕ್ಷೇತ್ರದ ಚುನಾವಣೆಯನ್ನೂ ರದ್ಧು ಪಡಿಸಲಾಗಿದೆ.
|