ಹತ ಪಾಕಿಸ್ತಾನದ ಮಾಜಿ ಪ್ರಧಾನಿ ಬೇನಜೀರ್ ಭುಟ್ಟೋ ಅವರ ಮರಣೋತ್ತರ ಪರೀಕ್ಷೆಯ ವರದಿಗಳನ್ನು ಪಾಕಿಸ್ತಾನ ಪೀಪಲ್ಸ್ ಪಾರ್ಟಿ ಅನಾವರಣಗೊಳಿಸಿದ್ದು, ಹತ್ಯೆಗೆ ಅತ್ಯಾಧುನಿಕ ಆಯುಧ ಬಳಕೆ ಕಾರಣ ಎಂದು ಅದು ತಿಳಿಸಿದೆ.
ಗಾಯವಿರುವ ಜಾಗದ ಕೆಳಗೆ ಎರಡರಿಂದ ಮೂರು ರೇಡಿಯೋ ಡೆನ್ಸಿಟಿಗಳು ಕಂಡುಬಂದಿವೆ ಎಂದು ಬಾಹ್ಯ ಏಜೆನ್ಸಿ ಮೂಲಕ ನಡೆಸಲಾದ ಈ ಮರಣೋತ್ತರ ಪರೀಕ್ಷಾ ವರದಿ ತಿಳಿಸಿದೆ.
ಸಾವಿಗೆ ತಲೆಬುರುಡೆ ಮೇಲಾದ ಗಾಯಗಳು ಕಾರಣವಾಗಿದ್ದು, ಇದು ರಕ್ತನಾಳಗಳಿಗೆ ತಡೆಯುಂಟುಮಾಡಿದವು. ಎಕ್ಸ್ ರೇ ವರದಿಯ ಪ್ರಕಾರ ಗಾಯದ ಆಳವು 5X3 ಸೆಂ.ಮೀ.ನಷ್ಟಿತ್ತು ಮತ್ತು ಈ ಗಾಯದ ಆಕಾರಗಳು ಮೊಟ್ಟೆಯಾಕಾರವನ್ನು ಹೊಲುವಂತಿದ್ದವು ಎಂದು ಪಿಪಿಪಿಯ ಹಣಕಾಸು ಕಾರ್ಯದರ್ಶಿ ಡಾ.ಬಾಬರ್ ಅವಾನ್ ಹೇಳಿದ್ದಾರೆ.
ಎಕ್ಸ್ ರೇ ವರದಿಗಳ ಪ್ರಕಾರ, ಎಕ್ಸ್ ರೇ ಮಾಪನದಲ್ಲಿ ಈ ಬಿರಿತದಿಂದಾಗಿ ಸುಮಾರು 35 ಮಿಲಿಮೀಟರ್‌ನಷ್ಟು ಜಾಗವು ಛಿದ್ರಗೊಂಡಿದೆ. ಗಾಯದ ಭಾಗವು ಅಗೋಚರ ವಿದ್ಯುತ್ಕಾಂತೀಯ ವಿಕಿರಣದಿಂದಾಗಿದೆ ಎಂದು ಆವಾನ್ ಹೇಳಿದರು.
ಪಾಕಿಸ್ತಾನ ಸರಕಾರವು ಬಚ್ಚಿಡಲು ಯತ್ನಿಸುತ್ತಿದ್ದ ಪ್ರಥಮ ಮರಣೋತ್ತರ ಪರೀಕ್ಷಾ ವರದಿಯನ್ನು ಡಾ.ಮುಸಿದಿಕ್ ಖಾನ್, ಡಾ. ಹಬೀಬ್ ಅಹ್ಮದ್ ಖಾನ್, ಡಾ.ಅಜಂ ಯೂಸಿಫ್, ಡಾ.ಔರಂಗ್‌ಜೇಬ್ ಖಾನ್, ಡಾ.ಸೈದಾ ಯಾಸಿನ್, ಡಾ.ಖುದ್ಸಿಯಾ ಅಂಜಮ್ ಖುರೇಷಿ ಮತ್ತು ಡಾ.ನಸೀರ್ ಖಾನ್ ನಡೆಸಿದ್ದರು ಎಂದು ಅವರು ಹೇಳಿದರು.
ರೇಡಿಯೋ, ಟಿವಿ ಅಥವಾ ಮೈಕ್ರೋವೇವ್ ಮುಂತಾದ ತಂತ್ರಜ್ಞಾನದಲ್ಲಿ ಬಳಸುವ ತರಂಗಗಳಂತೆ ವಿದ್ಯುತ್ಕಾಂತೀಯ ವಿಕಿರಣವು ಕಣ್ಣಿಗೆ ಕಾಣಿಸುವುದಿಲ್ಲ ಎಂದು ಆವನ್ ತಿಳಿಸಿದರು.
ಪಾಕಿಸ್ತಾನ ಸರಕಾರವು ಆ ವರದಿಯನ್ನು ಅಡಗಿಸಲು ಪ್ರಯತ್ನಿಸುತ್ತಿತ್ತು. ಆ ವರದಿಯು ಹತ್ಯೆಯ ಸ್ಪಷ್ಟ ಕಾರಣಗಳನ್ನು ತಿಳಿಸುತ್ತದೆ ಎಂದು ಹೇಳಿದರು.
ವಿಶ್ವಸಂಸ್ಥೆ ಆಯೋಗದಡಿಯಲ್ಲಿ ತನಿಖೆಯನ್ನು ನಡೆಸಬೇಕು ಎಂದು ಒತ್ತಾಯಿಸಿದ ಆವಾನ್, ವಿಶ್ವಸಂಸ್ಥೆ ಆಯೋಗಕ್ಕೆ ಎಲ್ಲಾ ಸಾಕ್ಷಿಗಳನ್ನು ಪಿಪಿಪಿ ಒದಗಿಸುತ್ತದೆ ಎಂದು ಭರವಸೆ ನೀಡಿದರು.
ಸ್ಕಾಟ್ಲೆಂಡ್ ಯಾರ್ಡ್ ತಂಡದ ತನಿಖೆಯನ್ನು ತಿರಸ್ಕರಿಸಿದ ಅವರು, ಮಾಜಿ ಪ್ರಧಾನಿ ಲಿಯಾಕತ್ ಅಲಿ ಖಾನ್ ಅವರ ಹತ್ಯೆಯ ತನಿಖೆಯನ್ನು ನಡೆಸಲು ಈ ತಂಡವು ವಿಫಲವಾಗಿತ್ತು ಎಂದು ಹೇಳಿದರು.
|