ಬೆನಜೀರ್ ಭುಟ್ಟೋ ಅವರನ್ನು ಬಂಧೂಕುದಾರಿಯೊಬ್ಬ ಕೊಂದಿದ್ದರೂ, ಭುಟ್ಟೋ ಅವರು ತನ್ನನ್ನು ಅಪಾಯಕ್ಕೆ ಒಡ್ಡಿಕೊಂಡಿದ್ದು, ಅವರ ಸಾವಿಗೆ ಅವರೇ ಕಾರಣ ಎಂದು ಪಾಕಿಸ್ತಾನ ಅಧ್ಯಕ್ಷ ಪರ್ವೇಜ್ ಮುಶರಫ್ ಹೇಳಿದ್ದಾರೆ.
"ಕಾರಿನಿಂದ ಹೊರಗೆ ನಿಂತಿದ್ದಕ್ಕೆ ಅವರನ್ನೇ ಹೊಣೆಯಾಗಿಸಬೇಕೆ ವಿನಹ ಇನ್ಯಾರನ್ನು ಅಲ್ಲ. ಆಕೆಯ ಸಾವಿಗೆ ಆಕೆಯೇ ಜವಾಬ್ದಾರಳು" ಎಂದು ಮುಶರಫ್ ಸಿಬಿಎಸ್ ವಾಹಿನಿಗೆ ನೀಡಿರುವ ಸಂದರ್ಶನದಲ್ಲಿ ಹೇಳಿದ್ದಾರೆ.
ಭುಟ್ಟೋ ಅವರು ತನ್ನ ಕಾರಿನ ಬಿಸಿಲು ಛಾವಣಿಯ ಹಿಡಿಕೆಯಲ್ಲಿ ಅವರ ತಲೆ ಸಿಕ್ಕಿಹಾಕಿಕೊಂಡ ಕಾರಣ ಅವರು ಸಾವುನ್ನಪ್ಪಿದ್ದಾರೆ ಎಂಬುದಾಗಿ ಪಾಕ್ ಸರ್ಕಾರ ನೀಡಿದ್ದ ಹೇಳಿಕೆಗೆ ವ್ಯಾಪಕ ಟೀಕೆಗಳು ವ್ಯಕ್ತವಾಗಿದ್ದು, ಹೆಚ್ಚಿನ ಮಂದಿ ಮುಶರಫ್ ಸರ್ಕಾರದ ಶಾಮೀಲಿನ ಬಗ್ಗೆ ಸಂಶಯಿಸಿದ್ದರು.
ಚುನಾವಣಾ ರಾಲಿಯಲ್ಲಿ ಮಾಜಿ ಪ್ರಧಾನಿ, ಪಾಕಿಸ್ತಾನ ಪೀಪಲ್ಸ್ ಪಕ್ಷದ ನಾಯಕಿ ಬೆನಜೀರ್ ಭುಟ್ಟೋ ಹತ್ಯೆಗೆ ಅಲ್-ಖೈದಾ ದಾಳಿ ಕಾರಣ ಎಂಬುದಾಗಿ ಪಾಕಿಸ್ತಾನ ಸರ್ಕಾರ ಹೇಳಿತ್ತು.
ಭುಟ್ಟೋ ಸಾವಿಗೆ ಗುಂಡೇಟು ಕಾರಣವಾಗಿದ್ದಿರಬಹುದೇ ಎಂಬುದಾಗಿ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು "ಹೌದು, ಸಾಧ್ಯತೆಗಳಿವೆ" ಎಂದು ಹೇಳಿದ್ದಾರೆ.
ಭಾಷಣ ಮುಗಿಸಿ ತೆರಳಲು ಅಣಿಯಾಗುತ್ತಿದ್ದ ಭುಟ್ಟೋ ಕಾರಿನ ಬಿಸಿಲು ಕಿಂಡಿಯಿಂದ ಹೊರಗೆ ಇಣುಕಿದಾಗ ಅವರ ಮೇಲೆ ಗುಂಡುಹಾರಿಸಲಾಗಿತ್ತು ಮತ್ತು ಆತ್ಮಾಹುತಿ ದಾಳಿಯನ್ನೂ ನಡೆಸಲಾಗಿತ್ತು.
|