ನಿಷೇಧಿತ ಎಲ್‌ಟಿಟಿಇ ಸಂಘಟನೆಯ 'ಸೇನಾ' ಗುಪ್ತಚರ ನಾಯಕ ಲಂಕಾ ಸೇನಾ ದಾಳಿಯಿಂದ ಹತನಾಗಿರುವುದಾಗಿ ವರದಿಯಾಗಿದೆ.
ಉಗ್ರರು ಪ್ರಯಾಣಿಸುತ್ತಿದ್ದ ವ್ಯಾನಿನ ವಿರುದ್ಧ ಶ್ರೀಲಂಕಾ ಸೇನೆಯು, ಬಂಡುಕೋರರ ಬಾಹುಳ್ಯವಿರುವ ವಾಯುವ್ಯ ಪ್ರಾಂತ್ಯದ ಮನ್ನಾರ್‌ನಲ್ಲಿ ಹೊಂಚು ದಾಳಿ ನಡೆಸಿದ್ದು, ಗುಪ್ತಚರ ನಾಯಕ ಸೇರಿದಂತೆ ಇತರ ಉಗ್ರರು ಹತರಾಗಿದ್ದಾರೆ.
ಕರ್ನೆಲ್ ಚಾರ್ಲ್ಸ್ (ಶನ್ಮುಗನಾಥನ್ ರವಿಶಂಕರ್, ಜಾಫ್ನಾ), ಎಲ್‌ಟಿಟಿಇ ಸೇನಾ ಗುಪ್ತಚರ ದಳದ ಮುಖ್ಯಸ್ಥ ಕಳೆದ ಸಾಂಯಕಾಲ ಸೇನೆಯ ನೆಲಬಾಂಬ್ ಆಕ್ರಮಣದಿಂದ ಸಾವಿಗೀಡಾಗಿರುವುದಾಗಿ ಎಲ್‌ಟಿಟಿಇ ಪರ ವೆಬ್‌ಸೈಟ್ ತಮಿಳ್‌ನೆಟ್ ಡಾಟ್ ಕಾಮ್ ವರದಿ ಮಾಡಿದೆ.
ಘಟನೆವೇಳೆಗೆ ಚಾರ್ಲ್ಸ್, ಮನ್ನಾರಿನಲ್ಲಿ ತನ್ನ ದೈನಂದಿನ ಪಡೆಗಳ ತಪಾಸಣೆ ನಡೆಸುತ್ತಿದ್ದರೆಂದು ವರದಿ ತಿಳಿಸಿದೆ. ಆದರೆ, ಎಲ್‌ಟಿಟಿಇಯಿಂದ ಈ ಕುರಿತು ಯಾವುದೇ ಅಧಿಕೃತ ಸ್ಪಷ್ಟನೆ ಇಲ್ಲ. ಜಾಫ್ನಾ, ಮನ್ನಾರ್ ಮತ್ತು ವಾವುನಿಯಾ ಪ್ರದೇಶಗಳಲ್ಲಿ ಭಾರೀ ಕಾದಾಟಗಳು ನಡೆಯುತ್ತಿದ್ದು, ದಿನೇದಿನೇ ಎಲ್‌ಟಿಟಿಇ ಸಾಮರ್ಥ್ಯ ಕುಂದುತ್ತಿದೆ.
ಶ್ರೀಲಂಕಾದ ರಕ್ಷಣಾ ಸಚಿವಾಲಯದ ವೆಬ್‌ಸೈಟ್ ಈ ಸುದ್ದಿಯನ್ನು ಎಲ್ಟಿಟಿಇ ಪರ ಸುದ್ದಿ ಮೂಲಗಳನ್ನು ಉಲ್ಲೇಖಿಸಿ ಪ್ರಕಟಿಸಿದೆಯಾದರೂ, ಸ್ಪಷ್ಟನೆ ಅಥವಾ ನಿರಾಕರಣೆ ಎರಡೂ ಇಲ್ಲ.
|