ಪಾಕಿಸ್ತಾನದ ಸ್ವಾಟ್ ಪ್ರದೇಶದಲ್ಲಿ ತಾಲಿಬಾನ್ ಪರ ಉಗ್ರಗಾಮಿಗಳ ವಿರುದ್ಧ ಭದ್ರತಾ ಪಡೆಗಳು ಹೊಸ ಕಾರ್ಯಾಚರಣೆ ಆರಂಭಿಸಿರುವ ನಡುವೆ ಸೇನಾ ನೆಲೆಯ ಬಳಿ ಸೋಮವಾರ ಆತ್ಮಾಹುತಿ ಬಾಂಬರ್ ಸ್ಫೋಟಿಸಿಕೊಂಡಿದ್ದರಿಂದ ಮೂವರು ಸೈನಿಕರು ಗಾಯಗೊಂಡಿದ್ದಾರೆ. ಸ್ವಾಟ್ ಕಣಿವೆಯ ಕಾಬಾಲ್ ಪಟ್ಟಣದ ಬಳಿಯ ಸೇನೆ ನೆಲೆಯ ಹತ್ತಿರದಲ್ಲಿರುವ ಚೌಕಿಯಲ್ಲಿ ಆತ್ಮಾಹುತಿ ಬಾಂಬರ್‌ನನ್ನು ತಡೆದಾಗ ಅವನು ಸ್ಫೋಟಕಗಳನ್ನು ಸಿಡಿಸಿದನೆಂದು ತಿಳಿದುಬಂದಿದೆ.
ಮೂವರು ಸೈನಿಕರಿಗೆ ಸಣ್ಣಪುಟ್ಟ ಗಾಯಗಳಾದವೆಂದು ಮಿಲಿಟರಿ ವಕ್ತಾರ ಮೇ.ಜ. ವಾಹೀದ್ ಅರ್ಷದ್ ತಿಳಿಸಿದರು. ಪಡೆಗಳು ಸನ್ನದ್ಧವಾಗಿದ್ದು, ಮುನ್ನೆಚ್ಚರಿಕೆ ವಹಿಸಿದ್ದರಿಂದ ಆತ್ಮಾಹುತಿ ಬಾಂಬರ್‌ನಿಂದ ಅಪಾರ ಹಾನಿ ಉಂಟಾಗಬಹುದಾದ ಸಾಧ್ಯತೆ ತಪ್ಪಿತು ಎಂದು ಅರ್ಷದ್ ತಿಳಿಸಿದ್ದಾರೆ. ಸೇನಾಧಿಕಾರಿಗಳು ಸೇನಾ ನೆಲೆಯ ಶಿಬಿರದಲ್ಲಿ ಉಗ್ರರ ವಿರುದ್ಧ ಕಾರ್ಯಾಚರಣೆಯ ಬಗ್ಗೆ ಪತ್ರಕರ್ತರಿಗೆ ವಿವರ ನೀಡಬೇಕಿದ್ದ ಸ್ವಲ್ಪ ಮುಂಚೆ ಆತ್ಮಾಹುತಿ ದಾಳಿ ಸಂಭವಿಸಿತು.
ಮಟ್ಟಾ ಪಟ್ಟಣದ ಬಳಿ ಸೇನೆಯು ಉಗ್ರರ ತಾಣದ ವಿರುದ್ಧ ಹೊಸ ದಾಳಿ ನಡೆಸಿದ ಬಳಿಕ ಸ್ವಾಟ್ ಪ್ರದೇಶದಲ್ಲಿ ಉಗ್ರಗಾಮಿಗಳ ಮುಂದಾಳತ್ವ ವಹಿಸಿದ್ದ ಮೂಲಭೂತವಾದಿ ಧರ್ಮಗುರು ಮೌಲಾನಾ ಫಜಲುಲ್ಲಾ ಭದ್ರತಾ ಪಡೆಗಳ ವಿರುದ್ಧ ಆಕ್ರಮಣ ಮಾಡುವಂತೆ ಕರೆನೀಡಿದ್ದ.
ಅಕ್ರಮ ಎಫ್‌ಎಂ ಕೇಂದ್ರದಿಂದ ಜಿಹಾದಿ ಪ್ರಸಾರ ಮಾಡುವ ಫಜಲುಲ್ಲಾ ಮುಲ್ಲಾ ರೇಡಿಯೊ ಎಂದೇ ಹೆಸರಾಗಿದ್ದರು ಮತ್ತು ಆಡಳಿತರೂಢ ಪಿಎಂಎಲ್-ಕ್ಯೂ ಮುಖಂಡರನ್ನು ಅಮೆರಿಕದ ಅಧ್ಯಕ್ಷ ಬುಷ್ ಮಕ್ಕಳು ಹಾಗೂ ಮುಷರ್ರಫ್ ಬೆಂಬಲಿಗರನ್ನು ಇಸ್ಲಾಂ ಶತ್ರುಗಳು ಎಂದೇ ಕರೆಯುತ್ತಿದ್ದ.
|