ಕದನವಿರಾಮ ರದ್ದು ಮಾಡುವ ಶ್ರೀಲಂಕಾ ಸರ್ಕಾರದ ನಿರ್ಧಾರದಿಂದ ಪ್ರತ್ಯೇಕ ರಾಷ್ಟ್ರದ ಎಲ್‌ಟಿಟಿಇ ಆಕಾಂಕ್ಷೆಗಳು ಗರಿಗೆದರಲು ನೆರವಾಗಿದ್ದು, ಇದು ರಾಷ್ಟ್ರವನ್ನು ದುರ್ಬಲಗೊಳಿಸಿದೆಯಲ್ಲದೇ ಭಾರತ ಸೇರಿದಂತೆ ಅಂತಾರಾಷ್ಟ್ರೀಯ ಸಮುದಾಯವನ್ನು ನಿರಾಶೆಗೊಳಿಸಿದೆ ಎಂದು ಶ್ರೀಲಂಕಾದ ಮುಖ್ಯ ಪ್ರತಿಪಕ್ಷ ಸೋಮವಾರ ತಿಳಿಸಿದೆ.
ಅಧ್ಯಕ್ಷ ಮಹೀಂದ್ರ ರಾಜಪಕ್ಷೆ ಅವರ ನಿರ್ಧಾರದಿಂದ ಶ್ರೀಲಂಕಾ ಅಂತಾರಾಷ್ಟ್ರೀಯವಾಗಿ ಮತ್ತು ಸ್ಥಳೀಯವಾಗಿ ದುರ್ಬಲವಾಗಿದೆ. ಇದರಿಂದ ಪ್ರತ್ಯೇಕ ರಾಷ್ಟ್ರ ನಿರ್ಮಿಸುವ ಎಲ್‌ಟಿಟಿಇ ಆಕಾಂಕ್ಷೆಗಳಿಗೆ ಅನುಕೂಲ ಮಾಡಿದೆ ಎಂದು ಯುನೈಟೆಡ್ ನ್ಯಾಷನಲ್ ಪಕ್ಷವು ಹೇಳಿಕೆಯಲ್ಲಿ ತಿಳಿಸಿದೆ. ಪ್ರಸಕ್ತ ಪರಿಸ್ಥಿತಿಯ ಬಗ್ಗೆ ಸ್ನೇಹಿ ರಾಷ್ಟ್ರಗಳಾದ ಅಮೆರಿಕ, ಜಪಾನ್ ಮತ್ತು ಭಾರತ ಸೇರಿದಂತೆ ವಿಶ್ವಸಂಸ್ಥೆ ಕೂಡ ತೀವ್ರ ನಿರಾಶೆ ಮತ್ತು ಹತಾಶೆಯ ಧ್ವನಿಯನ್ನು ವ್ಯಕ್ತಪಡಿಸಿದೆ.
ಅನೇಕ ದಾನಿ ರಾಷ್ಟ್ರಗಳು ಕೂಡ ಇದೇ ಅಭಿಪ್ರಾಯ ತಾಳಿದೆ ಎಂದು ಜನವರಿ 16ರಿಂದ ಕದನ ವಿರಾಮ ಒಪ್ಪಂದ ರದ್ದು ಮಾಡುವ ನಿರ್ಧಾರಕ್ಕೆ ಪ್ರತಿಕ್ರಿಯಿಸುತ್ತಾ ಅವರು ನುಡಿದರು.ಕದನವಿರಾಮದಲ್ಲಿ ಅಂತಾರಾಷ್ಟ್ರೀಯ ಸಮುದಾಯದ ನಂಬಿಕೆ ಮತ್ತು ಪ್ರಸಕ್ತ ಶಾಂತಿ ಉಪಕ್ರಮಕ್ಕೆ ಬೆಂಬಲದ ಸಂಕೇತವಾಗಿ ಅಮೆರಿಕ, ಭಾರತ ಮತ್ತು ಬ್ರಿಟನ್‌ನಿಂದ ಮಿಲಿಟರಿ ನೆರವು ನೀಡುತ್ತಿದೆ.
ರಕ್ತ ದಾಹಿ ಮತ್ತು ಯುದ್ಧದಾಹಿ ಆಡಳಿತಗಾರರು ವಾಸ್ತವ ಸ್ಥಿತಿಯನ್ನು ಅರ್ಥಮಾಡಿಕೊಂಡಿಲ್ಲ. ಹಿಂದಿನ ಅನುಭವಗಳಿಂದ ಪಾಠ ಕಲಿಯುವ ಸಾಮರ್ಥ್ಯವೂ ಅವರಿಗಿಲ್ಲ ಎಂದು ಯುಎನ್‌ಪಿ ತಿಳಿಸಿದೆ. ಇಂತಹ ದುರ್ಬಲ ಸ್ಥಿತಿಯಲ್ಲಿ ಅಧ್ಯಕ್ಷರು ಹೇಗೆ ಎಲ್‌ಟಿಟಿಇ ಜತೆ ಶಾಂತಿ ಮಾತುಕತೆ ನಡೆಸುತ್ತದೆ ಎಂದು ಪಕ್ಷವು ತಿಳಿಯಬಯಸಿದೆ.
|