1880ರಿಂದೀಚೆಗೆ ದಾಖಲಾಗಿರುವ ಎರಡನೇ ಅತೀ ತಾಪಮಾನದ ವರ್ಷ 2007 ಎಂದು ಹೊಸ ವರದಿಯೊಂದರಲ್ಲಿ ಸೂಚಿಸಲಾಗಿದ್ದು, ಜಾಗತಿಕ ಸರಾಸರಿ 14.73 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ. ಭೂ ನೀತಿ ಸಂಸ್ಥೆ ಪ್ರಕಟಿಸಿದ ವರದಿಯಲ್ಲಿ 2007ನೇ ವರ್ಷವು ಜಾಗತಿಕ ತಾಪಮಾನನ ಸ್ಥಿರವಾದ ಏರಿಕೆಯ ಸ್ವರೂಪಕ್ಕೆ ಸೂಕ್ತವಾಗಿದ್ದು, ಕಳೆದ ದಶಕದಲ್ಲಿ ದಾಖಲಾದ 8 ಅತೀ ಉಷ್ಣಮಾನದ ವರ್ಷಗಳಲ್ಲಿ ಸೇರ್ಪಡೆಯಾಗಿದೆ.
ಉತ್ತರ ಗೋಳಾರ್ಧದವೊಂದರಲ್ಲೇ ಪರಿಶೀಲನೆ ನಡೆಸಿದಾಗ, 2007ರಲ್ಲಿ 15.04 ಡಿಗ್ರಿ ಸೆಲ್ಸಿಯಸ್ ಸರಾಸರಿ ಉಷ್ಣಾಂಶ ದಾಖಲಾಗಿದ್ದು, 1880ರಿಂದೀಚೆಗೆ ಉತ್ತರಾರ್ಧ ಗೋಳದ ಅತೀ ತಾಪಮಾನದ ವರ್ಷವಾಗಿದೆ. ಭೂಗೃಹವನ್ನು ತಂಪುಗೊಳಿಸುವ ಅನೇಕ ಅಂಶಗಳ ನಡುವೆಯೂ 2007 ವರ್ಷವು ಅತ್ಯಂತ ತಾಪಮಾನದ ವರ್ಷವೆನಿಸಿದೆ.
ಉದಾಹರಣೆಗೆ ಸಾಗರದ ಮೇಲ್ಮೈಯನ್ನು ತಂಪುಗೊಳಿಸುವ ಲಾ ನೈನಾ ಬೆಳವಣಿಗೆಯಿಂದ ಜಾಗತಿಕ ತಾಪಮಾನ ಕಡಿಮೆಯಾಗಬೇಕಿತ್ತು. ಅದರ ಜತೆಗೆ ಸೂರ್ಯನ ತಾಪಮಾನವು ಸರಾಸರಿ ತಾಪಮಾನಕ್ಕಿಂತ 2007ರಲ್ಲಿ ಸ್ವಲ್ಪ ಕಡಿಮೆಯಿತ್ತು. ಏಕೆಂದರೆ 11 ವರ್ಷಗಳ ಸನ್‌ಸ್ಪಾಟ್ ಚಕ್ರದಲ್ಲಿ ಈ ವರ್ಷವು ಕನಿಷ್ಠವಾಗಿತ್ತು. ಆದರೆ ಇವೆಲ್ಲ ಅಂಶಗಳ ನಡುವೆಯೂ ಮಾನವ ಇತಿಹಾಸದಲ್ಲಿ 2007 ಅತ್ಯಂತ ತಾಪಮಾನದ ವರ್ಷಗಳಲ್ಲಿ ಒಂದೆಂದು ದಾಖಲಾಯಿತು.
ಹಸಿರುಮನೆ ಅನಿಲಗಳ ಹೆಚ್ಚಳದ ಪರಿಣಾಮವು ಭೂಮಿಯ ಹವಾಮಾನದ ಮೇಲೆ ಪ್ರಭಾವ ಬೀರುತ್ತಿರುವುದಕ್ಕೆ ಇದು ದ್ಯೋತಕವಾಗಿದೆ. 2007ರ ತಾಪಮಾನದ ಪರಿಣಾಮವನ್ನು ವಿಶ್ವಾದ್ಯಂತ ನಾವು ಗಮನಿಸಬಹುದು. ಆರ್ಕ್‌ಟಿಕ್ ಸಾಗರದಲ್ಲಿ ಬೇಸಗೆಯಲ್ಲಿ ಕಂಡುಬರುವ ಹಿಮದ ಪ್ರಮಾಣದಲ್ಲಿ ಗಣನೀಯ ಇಳಿಕೆಯಾಗಿದೆ.ಈಶಾನ್ಯ ಯೂರೋಪ್‌ನಲ್ಲಿ ತಾಪಮಾನವು 45 ಡಿಗ್ರಿಯಷ್ಟು ಏರಿ ಬಿಸಿಗಾಳಿಗೆ 500 ಜನರು ಬಲಿಯಾದರು.
ಜಪಾನ್‌ನಲ್ಲಿ ದಾಖಲೆಯ 40.9 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಯಿತು.. ಕೆಲವು ಪ್ರದೇಶಗಳು ತೀವ್ರ ತಾಪಮಾನದಿಂದ ಕುದ್ದುಹೋಗಿದ್ದರೆ, ಇನ್ನೂ ಕೆಲವು ಪ್ರದೇಶಗಳಲ್ಲಿ ದಾಖಲೆಯ ಮಳೆಯಿಂದ ಪ್ರವಾಹ ಉಕ್ಕೇರಿದೆ.
ಇಂಗ್ಲೆಂಡ್ ಮತ್ತು ವೇಲ್ಸ್‌ಗಳಲ್ಲಿ ವ್ಯಾಪಕ ದಾಖಲೆಯ ಪ್ರವಾಹ ಉಕ್ಕಿಹರಿದಿದ್ದು, 25 ದಶಲಕ್ಷ ಜನರು ಸಂತ್ರಸ್ತರಾಗಿದ್ದಾರೆ ಮತ್ತು 2500ಕ್ಕೂ ಹೆಚ್ಚು ಜನರು ಸತ್ತಿದ್ದಾರೆ. ಚೀನಾ, ಇಂಡೋನೇಶಿಯ, ಮೆಕ್ಸಿಕೊ, ಉರುಗ್ವೆ ಮತ್ತಿತರ ರಾಷ್ಟ್ರಗಳೂ ಪ್ರವಾಹದ ದೆಸೆಗೆ ಸಿಕ್ಕಿದೆ.
|