ತಾನು ಅಧಿಕಾರಕ್ಕೆ ಬಂದರೆ 60 ದಿನಗಳೊಳಗೆ ಅಮೆರಿಕದ ಸೇನೆಯನ್ನು ಹಿಂತೆಗೆದುಕೊಳ್ಳುವುದಾಗಿ ಡೆಮೋಕ್ರಾಟ್ ಪರ ಅಮೆರಿಕದ ಅಧ್ಯಕ್ಷ ಪದವಿಯ ಸ್ಪರ್ಧಿ ಹಿಲೇರಿ ಕ್ಲಿಂಟನ್ ಹೇಳುವ ಮೂಲಕ ಇರಾಕ್‌ನಿಂದ ಸೇನೆ ವಾಪಸಾತಿಗೆ ಗಡುವನ್ನು ವಿಧಿಸಿದ್ದಾರೆ. ನಾನು ಅಧ್ಯಕ್ಷೆಯಾಗಿ ಆಯ್ಕೆಯಾದ ಕೂಡಲೇ 60 ದಿನಗಳಲ್ಲಿ ಸೇನೆ ವಾಪಸಾತಿ ಆರಂಭಕ್ಕೆ ಯೋಜನೆ ರೂಪಿಸುವಂತೆ ಜಂಟಿ ಮುಖ್ಯಸ್ಥರಿಗೆ, ರಕ್ಷಣಾ ಕಾರ್ಯದರ್ಶಿಗೆ ಮತ್ತು ಭದ್ರತಾ ಸಲಹೆಗಾರರಿಗೆ ಆದೇಶ ನೀಡುವುದಾಗಿ ಅವರು ಪತ್ರಿಕಾ ಸಂದರ್ಶನ ಕಾರ್ಯಕ್ರಮದಲ್ಲಿ ತಿಳಿಸಿದರು.
ಪಡೆಗಳ ಹಿಂತೆಗೆತಕ್ಕೆ ಯೋಜಿಸದಿರುವ ಬುಷ್ ಆಡಳಿತವನ್ನು ಟೀಕಿಸಿದ ಹಿಲೇರಿ, ನನ್ನ ಅಧ್ಯಕ್ಷಗಿರಿಯ ಪ್ರಥಮ ದಿನದಂದೇ ನಾವು ಆ ಯೋಜನೆಯನ್ನು ಮುಂದುವರಿಸಿ 60 ದಿನಗಳಲ್ಲಿ ಪಡೆಗಳನ್ನು ಹಿಂತೆಗೆದುಕೊಳ್ಳುತ್ತೇವೆ ಎಂದು ಹೇಳಿದರು.
ಪ್ರತಿತಿಂಗಳು ನಾವು ಒಂದೆರಡು ತುಕಡಿಗಳನ್ನು ಹಿಂದೆ ಕರೆಸುತ್ತೇವೆ. ಅದೇ ಸಂದರ್ಭದಲ್ಲಿ ಇರಾಕ್ ಸರ್ಕಾರದ ಮೇಲೆ ಒತ್ತಡ ಹೇರುತ್ತೇವೆ. ಇರಾಕ್ ಸ್ಥಿರತೆ ಬಗ್ಗೆ ಆಸಕ್ತಿಯಿರುವ ಎಲ್ಲ ರಾಷ್ಟ್ರಗಳ ಜತೆ ಸೇರಿ ಕೆಲಸ ಮಾಡಲು ನಾವು ರಾಜತಾಂತ್ರಿಕ ಪ್ರಯತ್ನ ಮುಂದುವರಿಸುತ್ತೇವೆ ಎಂದು ಅವರು ನುಡಿದರು.
|