23 ವರ್ಷ ವಯಸ್ಸಿನ ಐಟಿ ವಿದ್ಯಾರ್ಥಿ ಮತ್ತು ವಿದೇಶಿ ರಾಜತಾಂತ್ರಿಕರ ಮಗನೊಬ್ಬನನ್ನು ಅಲ್ ಖೈದಾದ ಉನ್ನತ ಸೈಬರ್ ಭಯೋತ್ಪಾದಕನೆಂದು ಗುರುತಿಸಲಾಗಿದ್ದು, ಅವನಿಗೆ 16 ವರ್ಷಗಳ ಜೈಲುಶಿಕ್ಷೆಯನ್ನು ಇಲ್ಲಿನ ಕೋರ್ಟ್ ವಿಧಿಸಿದೆ.
ಪಶ್ಚಿಮ ಲಂಡನ್‌ನ ಶೆಪರ್ಡ್ ಬುಷ್‌ನ ಕಂಪ್ಯೂಟರ್ ವಿದ್ಯಾರ್ಥಿಯಾಗಿರುವ ಯೂನಿಸ್ ಸೌಲಿ ತನ್ನ ಮೇಲ್ಮಹಡಿಯಲ್ಲಿರುವ ವಸತಿಯನ್ನು ಪಶ್ಚಿಮ ದೇಶಗಳ ವಿರುದ್ಧ ಇಸ್ಲಾಮಿಕ್ ಉಗ್ರಗಾಮಿಗಳ ಪ್ರಚಾರ ಸಮರಕ್ಕೆ ನೆರವು ನೀಡಲು ಬಳಸಿಕೊಂಡನು ಎಂದು ಡೇಲಿ ಮೇಲ್ ವರದಿ ಮಾಡಿದೆ. ಜೇಮ್ಸ್ ಬಾಂಡ್ ಉಲ್ಲೇಖವನ್ನು ಅರೇಬಿಕ್ ಜತೆ ಬೆರೆಸಿ ಇರ್‌ಹಾಬಿ- 007 ಎಂಬ ನಾಮಾಂಕಿತದೊಂದಿಗೆ ಇರಾಕ್‌ನ ಅಲ್ ಕೈದಾ ನಾಯಕರ ಜತೆ ಕೆಲಸ ಮಾಡಿದ ಅವನು ಕೆಲವು ಭೀಭತ್ಸ ವಿಡಿಯೋಗಳನ್ನು ವೆಬ್‌ನಲ್ಲಿ ಅಳವಡಿಸುವ ವಿಧಾನವನ್ನು ತಿಳಿದಿದ್ದನು.
ಒಸಾಮಾ ಬಿನ್ ಲಾಡೆನ್ ಸಂದೇಶ, ಅಮೆರಿಕದ ನಿಕ್ ಬರ್ಗ್ ಮುಂತಾದ ಇರಾಕ್ ಒತ್ತೆಯಾಳುಗಳ ಅಪಹರಣ ಮತ್ತು ಹತ್ಯೆಯ ಚಿತ್ರಗಳನ್ನು ಅವನು ವೆಬ್ ಮೂಲಕ ಕಳಿಸಿದ್ದನು. ಸೌಲಿ ತನ್ನ ತಂದೆ ಮೊರಕ್ಕೊದ ರಾಜತಾಂತ್ರಿಕರ ಜತೆ 2001ರಲ್ಲಿ ಲಂಡನ್‌ಗೆ ಆಗಮಿಸಿದ. ಕೇಂದ್ರ ಲಂಡನ್‌ನ ಕಾಲೇಜೊಂದರಲ್ಲಿ ಮಾಹಿತಿ ತಂತ್ರಜ್ಞಾನ ಓದಿದ ಅವನು ಇಂಟರ್‌ನೆಟ್‌ನಲ್ಲಿ ಇರಾಕ್ ಯುದ್ಧದ ಚಿತ್ರಗಳನ್ನು ನೋಡಿ ಕ್ರಾಂತಿಕಾರಿಯಾಗಿ ಬದಲಾವಣೆಯಾದ.
2003ರಲ್ಲಿ ಅವನೇ ಸ್ವತಃ ಕಂಪ್ಯೂಟರ್ ಹ್ಯಾಕಿಂಗ್ ಕುರಿತ ಕೈಪಿಡಿ ಮುಂತಾದ ವಿಷಯಗಳನ್ನು ಕಳಿಸಲು ಆರಂಭಿಸಿದ. ಒಂದು ವರ್ಷವಾದ ಬಳಿಕ ತೀವ್ರವಾದದ ಚಿತ್ರಗಳನ್ನು ಮತ್ತು ಅಲ್ ಕೈದಾ ಪ್ರಚಾರವನ್ನು ವೆಬ್‌ನಲ್ಲಿ ಕಳಿಸಲು ಆರಂಭಿಸಿದ್ದ.
|