45 ರಾಷ್ಟ್ರಗಳ ಪರಮಾಣು ಸರಬರಾಜು ಸಮೂಹದಿಂದ ಭಾರತಕ್ಕೆ ಯುರೇನಿಯಂ ಮಾರಾಟ ಮಾಡುವುದಕ್ಕೆ ತಡೆ ವಿಧಿಸಬೇಕೊ, ಬೇಡವೋ ಎನ್ನುವ ಬಗ್ಗೆ ಆಸ್ಟ್ರೇಲಿಯ ಕಾದುನೋಡುವ ನೀತಿ ಅಳವಡಿಸಿದೆ. ಉಳಿದ ರಾಷ್ಟ್ರಗಳು ಭಾರತಕ್ಕೆ ಯುರೇನಿಯಂ ಮಾರಾಟ ಮಾಡುವುದನ್ನು ನಿರ್ಬಂಧಿಸುವ ಬಗ್ಗೆ ಸರ್ಕಾರ ಇನ್ನೂ ನಿರ್ಧರಿಸಿಲ್ಲ ಎಂದು ರಾಷ್ಟ್ರದ ವಿದೇಶಾಂಗ ಸಚಿವ ಸ್ಟೀಫನ್ ಸ್ಮಿತ್ ಅವರ ವಕ್ತಾರ ತಿಳಿಸಿರುವುದಾಗಿ ಆಸ್ಟ್ರೇಲಿಯ ಮಾಧ್ಯಮ ವರದಿ ಮಾಡಿದೆ.
ಭಾರತವು ಎನ್‌ಪಿಟಿಗೆ ಸಹಿ ಹಾಕದ ಹೊರತು ಆಸ್ಟ್ರೇಲಿಯ ಯುರೇನಿಯಂ ಮಾರಾಟ ಮಾಡುವುದಿಲ್ಲ ಎಂದು ಸ್ಮಿತ್ ಈ ವಾರದ ಆರಂಭದಲ್ಲಿ ಪ್ರಕಟಿಸಿದ್ದರು. ಆದರೆ ಜವಾಬ್ದಾರಿಯುತ ಅಣ್ವಸ್ತ್ರ ಶಕ್ತಿಯಾಗಿ ಭಾರತದ ದಾಖಲೆ ಮತ್ತು ದೀರ್ಘಾವಧಿಯ ರಾಜಕೀಯ ಸ್ಥಿರತೆ ಹಿನ್ನೆಲೆಯಲ್ಲಿ ಯುರೇನಿಯಂ ರಫ್ತು ಒಪ್ಪಂದಕ್ಕೆ ಚಾಲನೆ ನೀಡಿದ ಹೋವಾರ್ಡ್ ಸರ್ಕಾರದ ನಿರ್ಧಾರವನ್ನು ತಿರುಗುಮುರುಗು ಮಾಡುವ ಮೂಲಕ ಭಾರತಕ್ಕೆ ಕಸಿವಿಸಿ ಉಂಟಾಗುವ ಅಪಾಯವಿದೆ ಎಂದು ವಿಶ್ಲೇಷಕರು ಎಚ್ಚರಿಸಿದ್ದಾರೆ.
ಭಾರತದ ಸಂಸತ್ತಿನಲ್ಲಿ ಪ್ರತಿಪಕ್ಷದ ವಿರೋಧದಿಂದ ನೆನೆಗುದಿಗೆ ಬಿದ್ದಿರುವ 123 ಒಪ್ಪಂದವು ಪುನಃ ಜಾರಿಗೆಬಂದರೆ, ಯುರೇನಿಯಂ ಮಾರಾಟದಲ್ಲಿ ರುಡ್ ಸರ್ಕಾರದ ಹಿಂಚಲನೆಯು ಆಸ್ಟ್ರೇಲಿಯ-ಭಾರತ ಸಂಬಂಧದ ಮೇಲೆ ತೀವ್ರ ದುಷ್ಪರಿಣಾಮ ಬೀರಬಹುದು ಎಂದೂ ಅವರು ಎಚ್ಚರಿಸಿದ್ದಾರೆ.
ದೀರ್ಘಾವಧಿಯಲ್ಲಿ ಅದು ಭಾರತ-ಆಸ್ಟ್ರೇಲಿಯ ನಡುವೆ ಘರ್ಷಣೆಗೆ ನಾಂದಿಯಾಗಬಹುದು. ಆದರೆ 123 ಒಪ್ಪಂದ ಅನುಷ್ಠಾನಕ್ಕೆ ಬಂದರೆ ಮಾತ್ರ ಅದು ಸಂಭವಿಸುತ್ತದೆ ಎಂದು ವೋಲ್ಲೋಗಾಂಗ್ ವಿವಿಯ ದಕ್ಷಿಣ ಏಷ್ಯ ತಜ್ಞ ಸ್ಯಾಂಡಿ ಗೋರ್ಡನ್ ತಿಳಿಸಿದ್ದಾರೆ.
|