ಶ್ರೀಲಂಕಾದ ದಕ್ಷಿಣ ಮೊನಾರಾಗಲಾ ಜಿಲ್ಲೆಯ ಕುಗ್ರಾಮವೊಂದರಲ್ಲಿ ಶಂಕಿತ ತಮಿಳು ವ್ಯಾಘ್ರ ಬಂಡುಕೋರರು 9 ಜನರನ್ನು ಹತ್ಯೆ ಮಾಡಿದ ಘಟನೆ ನಡೆದಿದೆ. ಇದೇ ಜಿಲ್ಲೆಯಲ್ಲಿ ಸಂಭವಿಸಿದ ಬಸ್ ಸ್ಫೋಟದಲ್ಲಿ 27 ನಾಗರಿಕರು ಸತ್ತ ಮರುದಿನವೇ ಈ ದುರಂತ ಸಂಭವಿಸಿದೆ ಎಂದು ರಕ್ಷಣಾ ಸಚಿವಾಲಯ ಹೇಳಿದೆ.
ಭಯೋತ್ಪಾದಕರು ರಾತ್ರಿ ನಡೆಸಿದ ದಾಳಿಯಲ್ಲಿ 9 ಮುಗ್ಧ ನಾಗರಿಕರನ್ನು ಹತ್ಯೆ ಮಾಡಲಾಗಿದೆ ಎಂದು ಬಲ್ಲ ಮಾಹಿತಿಗಳು ತಿಳಿಸಿದ್ದು, ನಾಗರಿಕರ ಮೇಲೆ ಬಂಧೂಕುದಾರಿ ಗುಂಡು ಹಾರಿಸಿದ ಎಂದು ಹೇಳಿದೆ.
ನಾಗರಿಕ ರಕ್ಷಣಾ ಪಡೆ ಸಿಬ್ಬಂದಿಗೆ ನೆರವು ನೀಡುವ ನಾಗರಿಕರನ್ನು ಎಲ್‌ಟಿಟಿಇ ಗುರಿಯಾಗಿಸಿದೆ ಎಂದು ವರದಿಗಳನ್ನು ಉಲ್ಲೇಖಿಸಿ ರಕ್ಷಣಾ ಸಚಿವಾಲಯ ತಿಳಿಸಿದೆ. ಗ್ರಾಮಸ್ಥರ ಅನುಮಾನಕ್ಕೆ ಎಡೆಯಾಗದಂತೆ ನಾಗರಿಕರನ್ನು ಬಲವಂತವಾಗಿ ಕಾಡಿಗೆ ಕರೆದುಕೊಂಡು ಹೋಗಿ ಹತ್ಯೆಮಾಡಲಾಗುತ್ತಿದೆ ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ.
ಅರಣ್ಯಪ್ರದೇಶಗಳಲ್ಲಿ ಅಡಗಿರುವ ಬಂಡುಕೋರರನ್ನು ಹೊರಗಟ್ಟಲು ಸರ್ಕಾರದ ಪಡೆಗಳು ಶೋಧ ಆರಂಭಿಸಿದೆ. ವೆಲಿಯಾರ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆ ನಡೆಸುತ್ತಿದ್ದ ವಿಶೇಷ ಕಮಾಂಡೋಗಳ ಜತೆ ಎಲ್‌ಟಿಟಿಇ ಕಾರ್ಯಕರ್ತರು ಘರ್ಷಣೆಗೆ ಇಳಿದರು. ಈ ಕಾರ್ಯಾಚರಣೆಯಲ್ಲಿ ಒಬ್ಬ ಕಮಾಂಡೊ ಗಾಯಗೊಂಡಿದ್ದಾನೆ. ಸೇನೆಯ ಮುನ್ನಡೆಯನ್ನು ನಿಧಾನಗೊಳಿಸಲು ಭಯೋತ್ಪಾದಕರು ನೆಲಬಾಂಬ್‌ಗಳನ್ನು ಹುದುಗಿಸಿಟ್ಟಿದ್ದಾರೆಂದು ರಕ್ಷಣಾ ಮೂಲಗಳು ಹೇಳಿವೆ.
|