ಮಾಜಿ ಪ್ರಧಾನಮಂತ್ರಿ ಬೇನಜೀರ್ ಭುಟ್ಟೊ ಹತ್ಯೆಗೆ ಅಲ್ ಕೈದಾ ಮತ್ತು ತಾಲಿಬಾನ್ ದಂಡಾಧಿಕಾರಿ ಬೈತುಲ್ಲಾ ಮೆಹಸೂದ್ ಕಾರಣರೆಂದು ಅಮೆರಿಕದ ಕೇಂದ್ರೀಯ ಗುಪ್ತಚರ ದಳ(ಸಿಐಎ) ಬಹಿರಂಗಮಾಡಿದೆ. ಸ್ಥಳೀಯ ಮತ್ತು ಅಂತಾರಾಷ್ಟ್ರೀಯ ಭಯೋತ್ಪಾದಕರ ನಡುವೆ ಸಖ್ಯವು ಪಾಕಿಸ್ತಾನದ ಸ್ಥಿರತೆಗೆ ಗಂಭೀರ ಬೆದರಿಕೆಯೊಡ್ಡಿದೆ ಎಂದು ಅದು ತಿಳಿಸಿದೆ.
ರಾಷ್ಟ್ರದಲ್ಲಿ ಸಂಭವಿಸಿದ ಆತ್ಮಾಹುತಿ ಬಾಂಬ್ ಸ್ಫೋಟಗಳು ಮತ್ತು ದಾಳಿಗಳ ಹಿಂದೆ ಈ ಶಕ್ತಿಗಳ ಕೈವಾಡವಿದೆ ಎಂದೂ ಸಿಐಎ ತೀರ್ಮಾನಿಸಿದೆ. ಪಾಕಿಸ್ತಾನ ಪೀಪಲ್ಸ್ ಪಕ್ಷದ ನಾಯಕಿಯ ಅಮಾನುಷ ಹತ್ಯೆ ಬಗ್ಗೆ ಪಾಕಿಸ್ತಾನ ಸರ್ಕಾರದ ಹೇಳಿಕೆಯು ಸಿಐಎ ಶೋಧಕ್ಕೆ ಹೊಂದಿಕೆಯಾಗುತ್ತಿದೆ.
ಹತ್ಯೆ ತನಿಖೆಗೆ ಬ್ರಿಟನ್ ಸ್ಕಾಟಲೆಂಡ್ ಯಾರ್ಡ್ ತಂಡವೊಂದು ಪ್ರಸಕ್ತ ಇಸ್ಲಾಮಾಬಾದ್‌ನಲ್ಲಿದೆ. ಬೈತುಲ್ಲಾ ಮೆಹಸೂದ್ ಸುತ್ತಲಿನ ಜಾಲವು ಈ ಹತ್ಯೆ ನಡೆಸಿದೆ. ಅದನ್ನು ಪ್ರಶ್ನಿಸಲು ಕಾರಣವೇ ಇಲ್ಲ ಎಂದು ಸಿಐಎ ನಿರ್ದೇಶಕ ಮೈಕೆಲ್ ವಿ ಹೈಡನ್ ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ.
ಆದಾಗ್ಯೂ, ಸಿಐಎ ತಳೆದಿರುವ ನಿರ್ಧಾರದ ಹಿಂದಿನ ಬೇಹುಗಾರಿಕೆಯನ್ನು ವಿವರಿಸಲು ಹೈಡನ್ ನಿರಾಕರಿಸಿದರು. ಅಲ್ ಕೈದಾ ಮತ್ತು ಸ್ಥಳೀಯ ಬಂಡುಕೋರರ ನಡುವೆ ಸಖ್ಯವು ಅಮೆರಿಕಕ್ಕೆ ಆತಂಕದ ವಿಷಯವಾಗಿದೆ. ಪ್ರಕ್ಷುಬ್ಧ ಪಾಕಿಸ್ತಾನ-ಆಫ್ಘಾನಿಸ್ತಾನ ಗಡಿ ಪ್ರದೇಶದಲ್ಲಿ ಇದರಿಂದ ಭಯೋತ್ಪಾದಕ ಸಂಘಟನೆಗಳು ಪುನಃಸೇರಲು ನೆರವು ನೀಡಿತು ಎಂದು ಹೈಡನ್ ವಿವರಿಸಿದರು.
|