ಮುಂದಿನ ವಾರ ಫ್ರಾನ್ಸ್ ಅಧ್ಯಕ್ಷ ನಿಕೋಲಾಸ್ ಸಾರ್ಕೋಜಿ ಭಾರತಕ್ಕೆ ಎರಡು ದಿನಗಳ ಭೇಟಿ ನೀಡಲಿರುವ ಸಂದರ್ಭದಲ್ಲಿ ಅವರನ್ನು ಜತೆಗೂಡಿರುವ ಪ್ರೇಯಸಿ ಮಾಜಿ ಸೂಪರ್‌ಮಾಡೆಲ್ ಕಾರ್ಲಾ ಬ್ರೂನಿ ವಿಶ್ವವಿಖ್ಯಾತ ತಾಜ್‌ಮಹಲ್‌ನ್ನು ಒಬ್ಬಂಟಿಯಾಗಿ ಭೇಟಿಯಾಗಲಿದ್ದಾರೆ. ಬ್ರೂನಿಯ ಜತೆ ತಾಜ್‌ಮಹಲ್‌ಗೆ ಭೇಟಿ ನೀಡುವ ಅಧಿಕೃತ ಭಾಗವನ್ನು ಸಾರ್ಕೋಜಿ ಮೊಟಕು ಮಾಡಿದ್ದರೂ, ತಾಜ್‌ಮಹಲ್‌ಗೆ ಸಾರ್ಕೋಜಿ ಜತೆಗೂಡದಂತೆ ಬ್ರೂನಿ ಒಬ್ಬಂಟಿಯಾಗಿ ಭೇಟಿ ನೀಡುವುದಕ್ಕೆ ಒಪ್ಪಂದದ ಸಮಸ್ಯೆಗಳೂ ಕಾರಣವಾಗಿವೆ ಎಂದು ಡೇಲಿ ಟೆಲಿಗ್ರಾಫ್ ವರದಿ ಮಾಡಿದೆ.
ಮೂರನೇ ಎರಡರಷ್ಟು ರಾಷ್ಟ್ರಗಳಲ್ಲಿ ಕಾರ್ಲಾ ಬ್ರೂನಿ ಅವರು ಫ್ರೆಂಚ್ ಅಧ್ಯಕ್ಷರು ತಂಗಿರುವ ಕೊಠಡಿಯಲ್ಲೇ ತಂಗುವುದು ಅಸಾಧ್ಯವಾಗಿದೆ. ಆದರೆ ಅಧ್ಯಕ್ಷರಿಗೆ ಒಬ್ಬಂಟಿಯಾಗಿ ರಾತ್ರಿ ಹೇಗೆ ಕಳೆಯಬೇಕೆಂಬುದು ಗೊತ್ತಿಲ್ಲ ಎಂದು ಸಾರ್ಕೋಜಿ ಸಹಚರರೊಬ್ಬರು ಪ್ರತಿಕ್ರಿಯಿಸಿದ್ದಾರೆಂದು ಪತ್ರಿಕೆ ಹೇಳಿದೆ. ವಾಸ್ತವವಾಗಿ ಬ್ರೂನಿಯ ಉಪಸ್ಥಿತಿ ಬಗ್ಗೆ ಭಾರತ ಸರ್ಕಾರದಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಅಧಿಕೃತ ಔತಣಕೂಟಗಳಲ್ಲಿ ಅವರಿಗೆ ಸ್ಥಳಾವಕಾಶ ನೀಡುವ ಮುಂಚೆ ಅವರ ಸ್ಥಾನಮಾನದ ಬಗ್ಗೆ ಸುಳಿವು ನೀಡುವಂತೆ ಕೇಳಿದೆ.
ಜನವರಿ 26ರಂದು ಗಣರಾಜ್ಯ ಪಥಸಂಚಲನದಲ್ಲಿ ಫ್ರಾನ್ಸ್ ಅಧ್ಯಕ್ಷರು ಗೌರವ ಅತಿಥಿಯಾಗಿರುವ ನಡುವೆ ಬ್ರೂನಿ ಎಲ್ಲಿ ಆಸೀನರಾಗಬೇಕೆಂಬುದೇ ಪ್ರಶ್ನೆಯಾಗಿ ಉಳಿದಿದೆ. ತನ್ನ ಪತ್ನಿ ಸೆಸಿಲಾಗೆ ಅಕ್ಟೋಬರ್‌ನಲ್ಲಿ ವಿಚ್ಛೇದನ ನೀಡಿ ಬ್ರೂನಿಯನ್ನು ಸಂಗಾತಿಯಾಗಿ ಪಡೆದಿರುವ 52 ವರ್ಷ ವಯಸ್ಸಿನ ಅಧ್ಯಕ್ಷರು ತಮ್ಮ ಪ್ರೇಮಸಂಬಂಧದ ಹಿನ್ನೆಲೆಯಲ್ಲಿ ಜನಪ್ರಿಯತೆ ದರದಲ್ಲಿ ಕುಸಿತ ಅನುಭವಿಸಿದ್ದಾರೆ.
|