ಒಂದು ಮಗುವಿನ ನಿಯಮವನ್ನು ಉಲ್ಲಂಘಿಸುವ ಪ್ರತಿಷ್ಠಿತರು ಮತ್ತು ಶ್ರೀಮಂತರಿಗೆ ಜನಸಾಮಾನ್ಯರಿಗಿಂತ ಹೆಚ್ಚು ದಂಡವನ್ನು ವಿಧಿಸುವುದಾಗಿ ಕುಟುಂಬ ಯೋಜನೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮೂರು ದಶಕಗಳಷ್ಟು ಹಳೆಯದಾದ ಕುಟುಂಬ ಯೋಜನೆಯಲ್ಲಿ ನಗರಪ್ರದೇಶಗಳಲ್ಲಿ ದಂಪತಿ ಒಂದು ಮಗು ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಎರಡು ಮಕ್ಕಳನ್ನು ಹೊಂದಬೇಕೆಂಬ ಮಿತಿಯನ್ನು ವಿಧಿಸಿದೆ. ಆದರೆ ಪ್ರತಿಷ್ಠಿತ ವ್ಯಕ್ತಿಗಳು ಮತ್ತು ಶ್ರೀಮಂತರು ದಂಡ ಕಟ್ಟಲು ಶಕ್ತರಾಗಿರುವುದರಿಂದ ಕಾನೂನನ್ನು ಉಲ್ಲಂಘನೆ ಮಾಡುವ ಮೂಲಕ ಮಾಧ್ಯಮದ ಗಮನ ಸೆಳೆದಿದ್ದರು ಮತ್ತು ಸಾರ್ವಜನಿಕರ ಟೀಕೆಗೆ ಗುರಿಯಾಗಿದ್ದರು.
ಖ್ಯಾತನಾಮರು ಮತ್ತು ಶ್ರೀಮಂತ ದಂಪತಿ ಒಂದಕ್ಕಿಂತ ಹೆಚ್ಚು ಮಕ್ಕಳಿಗೆ ಜನ್ಮ ನೀಡಿದರೆ ಅವರಿಗೆ ಹೆಚ್ಚು ದಂಡ ವಿಧಿಸಲಾಗುವುದು ಎಂದು ಕುಟುಂಬ ಯೋಜನೆ ಕುರಿತ ಬೀಜಿಂಗ್ ಮುನ್ಸಿಪಲ್ ಆಯೋಗದ ಮುಖ್ಯಸ್ಥ ತಿಳಿಸಿದ್ದಾರೆ. ಕುಟುಂಬ ಯೋಜನೆ ಉಲ್ಲಂಘನೆಯ ದಾಖಲೆಗಳನ್ನು ರಾಷ್ಟ್ರೀಯ ಸಾಲ ವ್ಯವಸ್ಥೆಯ ವೈಯಕ್ತಿಕ ಕಡತಗಳಲ್ಲಿ ಬೀಜಿಂಗ್ ಆಯೋಗ ಬರೆಯುವುದರಿಂದ ಅವರು ಸಾಲ ಪಡೆಯುವ ಸಾಮರ್ಥ್ಯ ಕೂಡ ಕ್ಷೀಣಿಸುತ್ತದೆ.
ಚೀನಾ ಯುವ ಪತ್ರಿಕೆ ಮತ್ತು ಕ್ಯೂಕ್ಯೂ.ಕಾಮ್ ನಡೆಸಿದ ಜಂಟಿ ಸಮೀಕ್ಷೆಯಲ್ಲಿ 7917 ಜನರಲ್ಲಿ ಶೇ.44.6 ಜನರು ಪ್ರತಿಷ್ಠಿತರು ಮತ್ತು ಉಳ್ಳವರು ನಿಯಮ ಮುರಿದರೂ ದಂಡ ಕಟ್ಟಲು ಸಮರ್ಥರಿದ್ದಾರೆ ಎಂದು ಹೇಳಿದರೆ ಶೇ.61.1ರಷ್ಟು ಜನರು ಅದು ಅನ್ಯಾಯ ಎಂದು ಹೇಳಿದ್ದಾರೆ.
|