ಮಾಜಿ ಶಂಕಿತ ಭಯೋತ್ಪಾದಕನೆಂಬ ತಮ್ಮ ವಿರುದ್ಧ ಆರೋಪದಿಂದ ತೀವ್ರ ನೊಂದಿರುವ ಭಾರತೀಯ ವೈದ್ಯ ಮೊಹಮದ್ ಹನೀಫ್ ತಾವು ಅನುಭವಿಸಿದ ಕಷ್ಟಕ್ಕೆ ಆಸ್ಟ್ರೇಲಿಯ ಪರಿಹಾರ ನೀಡುವ ಬಗ್ಗೆ ಪರಿಶೀಲನೆ ಮಾಡಿದರೆ ತಾವು ಋಣಿಯಾಗಿರುವುದಾಗಿ ಹೇಳಿದ್ದಾರೆ.
ಲಂಡನ್ ಕಾರ್ ಬಾಂಬ್ ಸ್ಫೋಟದಲ್ಲಿ ಸುಳ್ಳು ಆರೋಪ ಹೊತ್ತ ಹನೀಫ್ ತಾವು ಎಲ್ಲವನ್ನೂ ಕಳೆದುಕೊಂಡಿದ್ದಾಗಿ ಹೇಳಿದ್ದಾರೆ. ತಾವು ನಿರ್ದೋಷಿಯಾಯಾದರೂ, ತಮ್ಮ ವೃತ್ತಿಜೀವನ ಮತ್ತು ವ್ಯಕ್ತಿತ್ವದ ಮೇಲೆ ಕಳಂಕ ತಟ್ಟಿದೆ ಎಂದು ಅವರು ನುಡಿದರು.
ನಾನು ಕೆಲಸ, ವೃತ್ತಿಜೀವನ ಎಲ್ಲವನ್ನೂ ಕಳೆದುಕೊಂಡೆ. ಯಾವುದೇ ಪಾಶ್ಚಿಮಾತ್ಯ ರಾಷ್ಟ್ರಕ್ಕೆ ಉನ್ನತ ಶಿಕ್ಷಣಕ್ಕೆ ತೆರಳಿದಾಗಲೂ ಈ ಪ್ರಶ್ನೆಯನ್ನು ಎದುರಿಸಬೇಕಾಗುತ್ತದೆ ಎಂದು ಡಾ. ಹನೀಫ್ ತಿಳಿಸಿದರು. ಕ್ವೀನ್ಸ್‌ಲ್ಯಾಂಡ್ ಆಸ್ಪತ್ರೆಯಲ್ಲಿ ತನ್ನ ಶಿಕ್ಷಣವನ್ನು ಮುಂದುವರಿಸಲು ವೈದ್ಯ ಹನೀಫ್ ಬಯಸಿದ್ದರೂ, ಅಲ್ಲಿಗೆ ವಾಪಸು ಹೋಗದಂತೆ ಅವರ ವಕೀಲರು ಸಲಹೆ ನೀಡಿದ್ದಾರೆ ಮತ್ತು ಆಸ್ಟ್ರೇಲಿಯದ ಫೆಡರಲ್ ಪೊಲೀಸ್ ತಾವು ತನಿಖೆ ಮುಂದುವರಿಸುವುದಾಗಿ ಹೇಳಿದ್ದಾರೆ.
ಮಾಜಿ ಶಂಕಿತ ಭಯೋತ್ಪಾದಕ ಎಂಬ ಹೆಸರನ್ನು ಕೇಳಿ ಸಾಕಾಗಿಹೋಗಿದೆ ಎಂದು ಹೇಳಿದ ಅವರು, ಈ ರೀತಿ ಹೆಸರಿಸುವುದನ್ನು ನಿಲ್ಲಿಸುವಂತೆ ಅವರು ಮನವಿಮಾಡಿಕೊಂಡರು. ಫೆಡರಲ್ ಪೊಲೀಸ್ ಪ್ರಕರಣದ ತನಿಖೆ ಮುಗಿದಿದೆಯೆಂದು ಪ್ರಕಟಿಸುವ ತನಕ ತಾವು ಆಸ್ಟ್ರೇಲಿಯಕ್ಕೆ ವಾಪಸಾಗುವುದಿಲ್ಲ ಎಂದು ಹನೀಫ್ ಹೇಳಿದರು.
|