ಗಾಜಾ ಗಡಿಯ ಗೋಡೆಯಲ್ಲಿ ಮುಸುಕುಧಾರಿ ಬಂಧೂಕುದಾರಿಗಳು ರಂಧ್ರಗಳನ್ನು ಮಾಡಿದ ಬಳಿಕ ಸಾವಿರಾರು ಪ್ಯಾಲೆಸ್ತೀನಿಯರು ಗಾಜಾ ಪಟ್ಟಿಯಿಂದ ಹೊರಗೆ ಈಜಿಪ್ಟ್‌ನೊಳಗೆ ಧಾವಿಸಿ ಆಹಾರ, ಇಂಧನ ಮತ್ತಿತರ ಸಾಮಗ್ರಿಗಳ ಖರೀದಿಗೆ ಮುಗಿಬಿದ್ದರು. ಗಾಜಾ ಪಟ್ಟಿಯಲ್ಲಿ ಇಸ್ರೇಲ್ ದಿಗ್ಬಂಧನ ವಿಧಿಸಿರುವುದರಿಂದ ಆಹಾರ ಸಾಮಗ್ರಿಗಳ ಅಭಾವ ತಲೆದೋರಿದೆ ಎಂದು ಪ್ರತ್ಯಕ್ಷದರ್ಶಿಗಳು ಮತ್ತು ಅಧಿಕಾರಿಗಳು ತಿಳಿಸಿದ್ದಾರೆ.
ಸಾವಿರಾರು ಪ್ಯಾಲೆಸ್ತೀನಿಯರು ಮುಗಿಬೀಳುತ್ತಿದ್ದರಂತೆ ಈಜಿಪ್ಟಿನ ಕಾವಲು ಸಿಬ್ಬಂದಿ ಮೂಕಪ್ರೇಕ್ಷಕರಾಗಿ ನಿಂತಿದ್ದರು. ಗಾಜಾದ ಏಕೈಕ ವಿದ್ಯುತ್ ಘಟಕಕ್ಕೆ ಇಸ್ರೇಲ್ ಇಂಧನವನ್ನು ಮಂಗಳವಾರ ವರ್ಗಾಯಿಸಿ ಪ್ಯಾಲೆಸ್ತೀನ್ ಪ್ರದೇಶದ ಐದು ದಿನಗಳ ದಿಗ್ಬಂಧನವನ್ನು ಸಡಿಲಿಸಿತ್ತು.
ಬುಧವಾರ ನಸುಕು ಹರಿಯುವ ಮುಂಚೆ ಪ್ಯಾಲೆಸ್ತೀನ್ ಬಂದೂಕುಧಾರಿಗಳು ಗಡಿ ಗೋಡೆಯಲ್ಲಿ ಗುಂಡುಗಳನ್ನು ಹೊಡೆದು ರಂಧ್ರಗಳನ್ನು ಕೊರೆದರು. ಹಮಾಸ್ ಭದ್ರತಾ ಪಡೆ ಬಳಿಕ ಎಲ್ಲವನ್ನೂ ಮುಚ್ಚಿ ಎರಡು ರಂಧ್ರ ಮಾತ್ರ ಮುಕ್ತವಾಗಿರಿಸಿ ಅವುಗಳ ಮೂಲಕ ವಾಹನಗಳ ಮುಕ್ತಸಂಚಾರಕ್ಕೆ ಅವಕಾಶ ಮಾಡಿದರು.
ಗಾಜಾ ಪೌರರು ಈಜಿಪ್ಟ್‌ನೊಳಗೆ ದಾಟಿ ಹಾಲು, ಸಿಗರೇಟು ಮತ್ತು ಇಂಧನದ ಪ್ಲಾಸ್ಟಿಕ್ ಬಾಟಲ್‌ಗಳೊಂದಿಗೆ ಹಿಂತಿರುಗಿದರು. ಇಸ್ರೇಲಿ ದಿಗ್ಬಂಧನದಿಂದ ಜರ್ಜರಿತವಾದ ಹಮಾಸ್ ಈಜಿಪ್ಟ್ ಮೇಲೆ ಒತ್ತಡ ಹಾಕುತ್ತಿದೆ. ಈಜಿಪ್ಟ್ ರಾಫಾ ಗಡಿಯನ್ನು ಮುಚ್ಚುವ ಮೂಲಕ ಇಸ್ರೇಲ್ ದಿಗ್ಬಂಧನಕ್ಕೆ ಸಹಕಾರ ನೀಡಿತ್ತು.
ಜನಸಾಮಾನ್ಯರಿಗೆ ತೊಂದರೆ ಉಂಟುಮಾಡದಂತೆ ಅಮೆರಿಕವು ಇಸ್ರೇಲಿಗೆ ಎಚ್ಚರಿಕೆ ನೀಡಿದ್ದು, ಗಾಜಾದ ಇಸ್ಲಾಮಿಕ್ ಹಮಾಸ್ ಆಡಳಿತದಿಂದ ಈ ಸಮಸ್ಯೆ ಉಂಟಾಗಿದೆ ಎಂದು ತಿಳಿಸಿದೆ. ಗಾಜಾ ಉಗ್ರಗಾಮಿಗಳಿಂದ ಗಡಿಯಲ್ಲಿ ರಾಕೆಟ್ ದಾಳಿಗಳಿಗೆ ಪ್ರತಿಕ್ರಿಯೆಯಾಗಿ ಇಸ್ರೇಲ್ ದಿಗ್ಬಂಧನ ವಿಧಿಸಿದೆ.
|