ಉತ್ತರ ಮಧ್ಯ ಶ್ರೀಲಂಕಾದ ಕ್ರಿಕೆಟುವೆವಾದಲ್ಲಿ ಎಲ್‌ಟಿಟಿಇ ಉಗ್ರಗಾಮಿಗಳಿಂದ ಹತರಾಗಿದ್ದಾರೆಂದು ಶಂಕಿಸಲಾದ ಕನಿಷ್ಠ 16 ನಾಗರಿಕರ ಕೊಳೆತ ದೇಹಗಳನ್ನು ಹೂತಿರುವುದನ್ನು ಪತ್ತೆಹಚ್ಚಲಾಗಿದೆ. ಶಂಕಿತ ಎಲ್‌ಟಿಟಿಇ ಭಯೋತ್ಪಾದಕರು ಯುವಕರ ದೇಹಗಳನ್ನು ಕೆಸರಿನಲ್ಲಿ ಹೂತಿದ್ದನ್ನು ಪೊಲೀಸರು ಪತ್ತೆಹಚ್ಚಿದರು ಎಂದು ರಕ್ಷಣಾ ಸಚಿವಾಲಯದ ಹೇಳಿಕೆ ಶುಕ್ರವಾರ ತಿಳಿಸಿದೆ.
ತಮ್ಮ ಜಾನುವಾರುಗಳಿಗಾಗಿ ಹುಡುಕುತ್ತಿದ್ದ ನಾಗರಿಕರ ಗುಂಪನ್ನು ಎಲ್‌ಟಿಟಿಇ ಹತ್ಯೆ ಮಾಡಿರುವ ವಿಷಯವನ್ನು ಆ ಪ್ರದೇಶದ ನಾಗರಿಕರು ಪೊಲೀಸರಿಗೆ ಮಾಹಿತಿ ನೀಡಿದರೆಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. ಮೃತರಲ್ಲಿ ಕೆಲವರ ಕೈಗಳನ್ನು ಹಿಂದಕ್ಕೆ ಕಟ್ಟಲಾಗಿತ್ತು ಎಂದು ವಕ್ತಾರರೊಬ್ಬರು ತಿಳಿಸಿದರು.
ಅವರನ್ನು 10 ದೇಹಗಳನ್ನು ಒಂದು ಗೋರಿಯಲ್ಲಿ ಮತ್ತು ಉಳಿದ ದೇಹಗಳನ್ನು ಮತ್ತೊಂದು ಗೋರಿಯಲ್ಲಿ ಹೂಳಲಾಗಿತ್ತು ಎಂದು ವಕ್ತಾರ ತಿಳಿಸಿದ್ದು, ಒಂದು ಮೃತದೇಹವನ್ನು ವ್ಯಕ್ತಿಯೊಬ್ಬ ಪತ್ತೆಹಚ್ಚಿದ ಬಳಿಕ ಪೊಲೀಸರಿಗೆ ಮಾಹಿತಿ ನೀಡಿದ ಎಂದು ವಕ್ತಾರ ತಿಳಿಸಿದರು.
ಪೊಲೀಸರು ಗುಂಡುಗಳು ತಾಗಿದ 16 ದೇಹಗಳನ್ನು ಹೊರತೆಗೆದಿದ್ದಾರೆ. ಕೆಲವು ದೇಹಗಳನ್ನು 10 ದಿನಗಳಿಗಿಂತ ಹೆಚ್ಚು ಕಾಲ ಹೂಳಿರುವುದನ್ನು ಪರೀಕ್ಷೆಯಿಂದ ತಿಳಿದುಬಂದಿದೆ.
|