ಯಹೂದಿಗಳು ಮತ್ತು ಇಸ್ರೇಲಿ ಜನರು ಜಾಗತಿಕ ಹಿಂಸಾಚಾರ ಸಂಸ್ಕೃತಿಯಲ್ಲಿ "ಅತಿದೊಡ್ಡ ಆಟಗಾರರು" ಎಂದು ಆನ್‌ಲೈನ್‌ನಲ್ಲಿ ಲೇಖನ ಬರೆದು ವಿವಾದಕ್ಕೆ ಕಾರಣರಾಗಿದ್ದ ಮಹಾತ್ಮ ಗಾಂಧೀಜಿ ಮೊಮ್ಮಗ ಅರುಣ್ ಗಾಂಧಿ ಅವರು ರಾಚೆಸ್ಟರ್ ವಿಶ್ವವಿದ್ಯಾನಿಲಯದ ಶಾಂತಿ ಸಂಸ್ಥೆಯ ಅಧ್ಯಕ್ಷ ಪದವಿಗೆ ರಾಜೀನಾಮೆ ಸಲ್ಲಿಸಿದ್ದಾರೆ.
ಜನವರಿ 7ರಂದು ತಾವು ಬರೆದ ಪ್ರಬಂಧವನ್ನು ಅಹಿಂಸಾ ತತ್ವಕ್ಕೆ ವಿರುದ್ಧವಾದ ಪದಗಳಲ್ಲಿ ವಿಮರ್ಶಿಸಲಾಗಿದೆ. ಹಿಂಸಾಚಾರ ಹರಡುವುದರ ಕುರಿತು ಆರೋಗ್ಯಕರ ಚರ್ಚೆಯನ್ನು ಆರಂಭಿಸುವುದು ನನ್ನ ಉದ್ದೇಶವಾಗಿತ್ತು. ನಾನು ಈ ಗುರಿ ಸಾಧಿಸುವಲ್ಲಿ ಸಫಲವಾಗಲಿಲ್ಲ, ಅದರ ಬದಲು, ಅನುದ್ದೇಶಿತವಾಗಿ, ನನ್ನ ಮಾತುಗಳು ನೋವು, ಸಿಟ್ಟು, ಗೊಂದಲ ಮತ್ತು ಇರಿಸುಮುರಿಸಿಗೆ ಕಾರಣವಾದವು ಎಂದು ತಮ್ಮ ರಾಜೀನಾಮೆ ಪತ್ರದಲ್ಲಿ ಎಂ.ಕೆ.ಗಾಂಧಿ ಅಹಿಂಸಾ ಸಂಸ್ಥೆಯ ಸ್ಥಾಪಕರಾದ ಅರುಣ್ ಗಾಂಧಿ ಅವರು ತಿಳಿಸಿದ್ದಾರೆ.
ಅವರು ವಾಷಿಂಗ್ಟನ್‌ಪೋಸ್ಟ್ ಡಾಟ್ ಕಾಂನ ಧಾರ್ಮಿಕ ಬ್ಲಾಗಿನಲ್ಲಿ ಗಾಂಧಿ ಅವರು ಯಹೂದಿಗಳ ಅಸ್ತಿತ್ವದ ಕುರಿತಂತೆ ಲೇಖನ ಬರೆದಿದ್ದರು.
ಅರುಣ್ ಗಾಂಧಿ ಅವರು ಈ ಸಂಸ್ಥೆಯನ್ನು 1991ರಲ್ಲಿ ಟೆನ್ನಿಸ್ಸೀ ಎಂಬಲ್ಲಿ ಸ್ಥಾಪಿಸಿದ್ದು, 2007ರಲ್ಲಿ ಅದನ್ನು ನ್ಯೂಯಾರ್ಕಿನ ರಾಚೆಸ್ಟರ್‌ಗೆ ವರ್ಗಾಯಿಸಿದ್ದರು. ಅರುಣ್ ಅವರು ಗಾಂಧೀಜಿಯ ಎರಡನೇ ಪುತ್ರ ಮಣಿಲಾಲ್ ಅವರ ಮಗನಾಗಿದ್ದು, ಮಹಾತ್ಮ ಗಾಂಧೀಜಿಯ ಐದನೇ ಮೊಮ್ಮಗ.
|