ಪಾಕಿಸ್ತಾನಿ ಭದ್ರತಾ ಪಡೆಗಳ ವಿರುದ್ಧ ಗಮನ ಕೇಂದ್ರೀಕರಿಸಿದ ಪಾಕಿಸ್ತಾನದ ಮೋಸ್ಟ್ ವಾಂಟೆಡ್ ಭಯೋತ್ಪಾದಕ ಬೈತುಲ್ಲಾ ಮೆಹಸೂದ್‌ನನ್ನು ತೆಹ್ರೀಕ್-ಎ-ತಾಲಿಬಾನ್-ಪಾಕಿಸ್ತಾನ್ (ಟಿಟಿಪಿ)ದ ಕಮಾಂಡರ್ ಹುದ್ದೆಯಿಂದ ತಾಲಿಬಾನ್ ಮುಖ್ಯಸ್ಥ ಮುಲ್ಲಾ ಒಮರ್ ಪದಚ್ಯುತಗೊಳಿಸಿದ್ದಾನೆ ಎಂದು ವರದಿಗಳು ತಿಳಿಸಿವೆ.
ದಕ್ಷಿಣ ವಜೀರಿಸ್ತಾನದಲ್ಲಿ ತಾಲಿಬಾನ್-ಪರ ಉಗ್ರರನ್ನು ಮಟ್ಟ ಹಾಕಲು ಮಿಲಿಟರಿ ಕಾರ್ಯಾಚರಣೆ ಚುರುಕುಗೊಳಿಸುವಂತೆ ಪಾಕ್ ಅಧ್ಯಕ್ಷ ಪರ್ವೇಜ್ ಮುಷರಫ್ ಆದೇಶಿಸಿದ್ದರೂ, ತಾಲಿಬಾನ್ ಪಡೆಗಳೆಲ್ಲವೂ ಅಫ್ಘಾನಿಸ್ತಾನದಲ್ಲಿ ಬೀಡುಬಿಟ್ಟಿರುವ ನ್ಯಾಟೋ ಪಡೆಗಳ ವಿರುದ್ಧವೇ ಗಮನ ಹರಿಸಬೇಕು ಎಂದು ಮುಲ್ಲಾ ಒಮರ್ ಆದೇಶಿಸಿದ್ದ.
ಪಾಕಿಸ್ತಾನಿ ತಾಲಿಬಾನ್ ಪಡೆಯ ಮುಖ್ಯಸ್ಥನಾಗಿ ಒಮರ್‌ನಿಂದ ನೇಮಕಗೊಂಡಿದ್ದ ಮೆಹಸೂದ್, ಅಫ್ಘಾನಿಸ್ತಾನದ ತಾಲಿಬಾನ್‌ಗೆ ಬೆಂಬಲ ನೀಡುವ ಬದಲು, ತನ್ನೆಲ್ಲಾ ಹೋರಾಟಗಾರರು ಪಾಕಿಸ್ತಾನಿ ಭದ್ರತಾ ಪಡೆಗಳ ವಿರುದ್ಧ ಮುಗಿಬೀಳುವಂತೆ ನಿರ್ದೇಶಿಸಿದ್ದ. ನ್ಯಾಟೋ ಬದಲು ಪಾಕ್ ಪಡೆಗಳ ವಿರುದ್ಧ ಹೋರಾಟ ಮಾಡುವಂತೆ ಮಾಡಿದ್ದಕ್ಕಾಗಿ ಮೆಹಸೂದ್‌ನನ್ನು ಒಮರ್ ಕಿತ್ತು ಹಾಕಿದ್ದಾನೆ ಎಂದು ವರದಿಗಳು ತಿಳಿಸಿವೆ.
ವಜೀರಿಸ್ತಾನದಲ್ಲಿ ಪಾಕ್ ಪಡೆಗಳ ವಿರುದ್ಧ ಹೋರಾಡುವ ಬದಲು ಅಫ್ಘಾನಿಸ್ತಾನದಲ್ಲೇ ತಾಲಿಬಾನ್ ಪರ ಹೋರಾಡಬೇಕು ಎಂಬುದು ಒಮರ್ ನಿಲುವಾಗಿತ್ತು. ಇದೀಗ ಟಿಟಿಪಿ ಮುಖ್ಯಸ್ಥನನ್ನಾಗಿ ಮೌಲ್ವಿ ಫಕೀರ್ ಮಹಮದ್ ಎಂಬಾತನನ್ನು ನೇಮಿಸಲಾಗಿತ್ತಾದರೂ, ಆತ ಈ ಹುದ್ದೆ ನಿರಾಕರಿಸಿದ್ದಾನೆ ಎಂದು ತಿಳಿದುಬಂದಿದೆ.
ಬೈತುಲ್ಲಾ ಮೆಹಸೂದ್ ಈಗಾಗಲೇ ಮಾಜಿ ಪ್ರಧಾನಿ ಬೇನಜೀರ್ ಭುಟ್ಟೋ ಹತ್ಯೆಯ ಪ್ರಧಾನ ಶಂಕಿತನಾಗಿ ಪಾಕ್ ಸರಕಾರದಿಂದ ಗುರುತಿಸಲ್ಪಟ್ಟಿದ್ದಾನೆ.
|