ಸೂಕ್ಷ್ಮ ಪರಮಾಣು ಕಾರ್ಯವನ್ನು ಸ್ಥಗಿತಗೊಳಿಸಲು ನಿರಾಕರಿಸಿರುವ ಬಗ್ಗೆ ವಿಶ್ವಸಂಸ್ಥೆ ಭದ್ರತಾ ಮಂಡಳಿ ಹೊಸ ದಿಗ್ಬಂಧನಗಳನ್ನು ಇರಾನ್ ವಿರುದ್ಧ ವಿಧಿಸಿದರೆ ಗಂಭೀರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಇರಾನ್ ಎಚ್ಚರಿಕೆ ನೀಡಿದೆ. ಹೊಸ ದಿಗ್ಬಂಧನ ಅನುಮೋದನೆಯಾದರೆ ಅದರಿಂದ ಗಂಭೀರ ಮತ್ತು ತಾರ್ಕಿಕ ಪರಿಣಾಮಗಳು ಉಂಟಾಗುತ್ತದೆ. ಅದನ್ನು ನಾವು ಕಾಲಕ್ರಮೇಣ ತಿಳಿಸುತ್ತೇವೆ ಎಂದು ವಿದೇಶಾಂಗ ಸಚಿವ ಮೊನೊಚೌಕ್ ಮೊಟ್ಟಕಿ ಮೊಟ್ಟಕಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಯುರೇನಿಯಂ ಸಂಸ್ಕರಣೆಯ ಸ್ಥಗಿತಕ್ಕೆ ಇರಾನ್ ನಿರಾಕರಿಸಿರುವ ನಡುವೆ ಮೂರನೇ ಹಂತದ ದಿಗ್ಬಂಧನಗಳನ್ನು ಇರಾನ್ ವಿರುದ್ಧ ಹೇರುವ ಬಗ್ಗೆ ಸೋಮವಾರ ಭದ್ರತಾ ಮಂಡಳಿ ಚರ್ಚಿಸಬೇಕಾಗಿದೆ. ದಿಗ್ಬಂಧನ ಪ್ಯಾಕೇಜಿನ ಬಗ್ಗೆ ಕಳೆದ ವಾರ ವೀಟೊ ಅಧಿಕಾರ ಹೊಂದಿರುವ ಬ್ರಿಟನ್, ಚೀನಾ, ಫ್ರಾನ್ಸ್, ರಷ್ಯಾ ಮತ್ತು ಅಮೆರಿಕ ಹಾಗೂ ಜರ್ಮನಿಯ ವಿದೇಶಾಂಗ ಸಚಿವರು ಒಪ್ಪಿಕೊಂಡಿದ್ದರು.
ಇರಾನ್ ಯುರೇನಿಯಂ ಸಂಸ್ಕರಣೆ ಪ್ರಕ್ರಿಯೆ ಮುಂದುವರಿಕೆಯಿಂದ ಈಗಾಗಲೇ ಎರಡು ಹಂತಗಳ ವಿಶ್ವಸಂಸ್ಥೆಯ ದಿಗ್ಬಂಧನಗಳನ್ನು ಎದುರಿಸುತ್ತಿದೆ. ಯುರೇನಿಯಂ ಸಂಸ್ಕರಣೆ ಪ್ರಕ್ರಿಯೆಯಲ್ಲಿ ಇರಾನ್ ಪರಮಾಣು ಇಂಧನ ತಯಾರಿಕೆ ಮತ್ತು ಪರಮಾಣು ಬಾಂಬ್‌ನ ವಿದಳನ ಭಾಗವನ್ನು ವಿಸ್ತರಿಸುವ ಸಾಧ್ಯತೆಯಿದೆ. ತನ್ನ ಜನಸಂಖ್ಯೆಯ ಇಂಧನ ಅಗತ್ಯ ಪೂರೈಸಲು ಯುರೇನಿಯಂ ಸಂಸ್ಕರಣೆ ಮಾಡುವ ಹಕ್ಕನ್ನು ತಾನು ಹೊಂದಿರುವುದಾಗಿ ಇರಾನ್ ಹೇಳುತ್ತಿದೆ.ಪರಮಾಣು ಕಾರ್ಯಕ್ರಮವು ಮಿಲಿಟರಿ ಉದ್ದೇಶದಿಂದ ಕೂಡಿದೆ ಎಂಬ ವಾದವನ್ನು ಇರಾನ್ ನಿರಾಕರಿಸಿದೆ.
|